ಯಡಿಯೂರಪ್ಪ ಸ್ಥಿಮಿತ ಕಳೆದುಕೊಂಡು ಮನಸೋ ಇಚ್ಛೆ ಮಾತಾಡ್ತಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರದ ದಾಖಲೆ ಇದ್ದರೆ ಬಿಡುಗಡೆ ‌ಮಾಡಿ
ಬೆಂಗಳೂರು(ಫೆ.21):ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದ್ರು. ಈ ಮೂವರು ಸಿಎಂ ಆಗುವ ಮುನ್ನ ಇವರ ಆಸ್ತಿ ಎಷ್ಟಿತ್ತು? ಸಿಎಂ ಆದ ನಂತರ ಆಸ್ತಿ ಎಷ್ಟಾಯ್ತು? ಈ ಬಗ್ಗೆ ತನಿಖೆಗೆ ಸಿದ್ದರಿದ್ದಾರೆಯೇ? ನಿಮಗೆ ದಮ್ ಅಥವಾ ತಾಕತ್ ಇದ್ದರೆ ನನ್ನ ಸವಾಲ್ ಸ್ವೀಕರಿಸಿ - ಹೀಗೆ ಬಿಜೆಪಿ ನಾಯಕರಿಗೆ ಸವಾಲ್ ಎಸೆದದ್ದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ನಾನು ಸಿಎಂ ಆದ ಕೂಡಲೇ ಸಿದ್ದರಾಮಯ್ಯನವರನ್ನ ಜೈಲಿಗೆ ಕಳುಹಿಸುವೆ ಎನ್ನುವ ಯಡಿಯೂರಪ್ಪ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ ಎಂದ ಉಗ್ರಪ್ಪ, ಯಡಿಯೂರಪ್ಪ ಸ್ಥಿಮಿತ ಕಳೆದುಕೊಂಡು ಮನಸೋ ಇಚ್ಛೆ ಮಾತಾಡ್ತಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರದ ದಾಖಲೆ ಇದ್ದರೆ ಬಿಡುಗಡೆ ಮಾಡಿ, ನೀವು ನಿಮ್ಮಪ್ಪನ ಆಣೆಗೂ ಈ ರಾಜ್ಯದಲ್ಲಿ ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲೂ ಸಾಧ್ಯವಿಲ್ಲ ಅಂತ ಕಟು ಮಾತುಗಳಲ್ಲಿ ಹರಿಹಾಯ್ದರು.
ಡೀನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಈಗಲೂ ಜಾಮೀನಿನ ಮೇಲಿದ್ದಾರೆ. ಈಗಲೂ 20-21 ಕೇಸ್ ಯಡಿಯೂರಪ್ಪ ಮೇಲಿದೆ. ಹೀಗಿರುವಾಗ ಯಾವ ನೈತಿಕತೆಯಿಂದ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತೀರಿ ಅಂತ ಉಗ್ರಪ್ಪ ಪ್ರಶ್ನಿಸಿದ್ರು. ಅಷ್ಟೇ ಅಲ್ಲದೇ, ಸಿದ್ದರಾಮಯ್ಯನವರನ್ನ ಜೈಲಿಗೆ ಕಳುಹಿಸಲು ನೀವು ಸಿಎಂ ಆಗುವವರೆಗೂ ಯಾಕೆ ಕಾಯುತ್ತೀರಿ? ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ನಿಮಗೆ ಧಮ್ ಇದ್ದರೆ ನಮ್ಮ ಸರ್ಕಾರದ ಮೇಲೆ ಎಫ್.ಐ.ಆರ್. ಮಾಡಿಸಿ. ನಮ್ಮ ಸಿಎಂನ ಅರೆಸ್ಟ್ ಮಾಡಿಸಿ ಅಂತ ಸವಾಲ್ ಹಾಕಿದ್ರು. ಯಡಿಯೂರಪ್ಪ ನವರೇ ನಿಮಗೆ ಸವಾಲ್ ಹಾಕುತ್ತಿದ್ದೇನೆ, ನಿಮ್ಮ ಬಳಿ ದಾಖಲೆ ಇದ್ದರೆ 24 ಗಂಟೆಗಳೊಳಗೆ ಬಹಿರಂಗಪಡಿಸಿ ಬಂಧನಕ್ಕೊಳಪಡಿಸಿ, ಇಲ್ಲದಿದ್ದರೆ ಬಹಿರಂಗ ಕ್ಷಮೆಯಾಚಿಸಿ ಎಂದೂ ಉಗ್ರಪ್ಪ ವಾಗ್ದಾಳಿ ನಡೆಸಿದ್ರು.
