ಬೆಂಗಳೂರು (ಸೆ. 29):  ಮುಂದಿನ ಆರು ತಿಂಗಳೊಳಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ಅನುದಾನ ಕಡಿತ ಮಾಡಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯಕ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಎಚ್ಚರಿಕೆ ನೀಡಿದೆ.

ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳು ಸಾವಿರಾರು ಸಂಖ್ಯೆಯಲ್ಲಿ ಖಾಲಿ ಉಳಿದಿವೆ. ಇದರಿಂದ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ, ಸಾಧ್ಯವಾದಷ್ಟು ಬೇಗ ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ. ಹುದ್ದೆಗಳು ಖಾಲಿ ಇರುವುದರಿಂದ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರುಗಳು ಯುಜಿಸಿ ಬಂದಿರುವುದರಿಂದ ಈ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ನೇಮಕಾತಿಗೆ ಗಡುವು: ಈ ಸಂಬಂಧ ಇತ್ತೀಚೆಗೆ ಆದೇಶ ಹೊರಡಿಸಿರುವ ಯುಜಿಸಿ, ಮುಂದಿನ 15 ದಿನಗಳಲ್ಲಿ ಖಾಲಿ ಹುದ್ದೆಗಳನ್ನು ಗುರುತಿಸಬೇಕು, ನಂತರದ 30 ದಿನದೊಳಗೆ ಹುದ್ದೆ ಭರ್ತಿಗೆ ಅನುಮತಿ ಪಡೆಯಬೇಕು, ಆ ನಂತರದ 15 ದಿನಗಳಲ್ಲಿ ಜಾಹಿರಾತು ಪ್ರಕಟಿಸಬೇಕು, 15 ದಿನಗಳಲ್ಲಿ ಆಯ್ಕೆ ಸಮಿತಿ ರಚಿಸಬೇಕು, 30 ದಿನದೊಳಗೆ ಅರ್ಜಿ ವಿಲೇವಾರಿ ಮಾಡಬೇಕು, 30 ದಿನದೊಳಗೆ ಸಂದರ್ಶನ ಏರ್ಪಡಿಸಬೇಕು, ನಂತರದ 30 ದಿನದೊಳಗೆ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಒಟ್ಟಾರೆ ಆರು ತಿಂಗಳೊಳಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಖಾಲಿ ಇರುವ ಹುದ್ದೆಗಳು: ರಾಜ್ಯದ ೧೯ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 3900 ಬೋಧಕ ಮತ್ತು 8406 ಬೋಧಕೇತರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಆದರೆ, 2044 ಬೋಧಕ ಮತ್ತು 3626 ಬೋಧಕೇತರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. 1856 ಬೋಧಕ ಮತ್ತು 4780 ಬೋಧಕತೇರ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿ ಉಳಿದಿವೆ.

ವಿವಿ ಹುದ್ದೆಗಳ ಭರ್ತಿಗೆ ಹಲವಾರು ಬಾರಿ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡದಿರುವುದರಿಂದ ಅನಿ ವಾರ್ಯವಾಗಿ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಅನುದಾನ ನೀಡದಿರುವುದರಿಂದ ಹೊಸ ವಿವಿಗಳಿಗೆ ಕನಿಷ್ಠ ಮೂಲಸೌ ಕರ್ಯ ಕಲ್ಪಿಸುವುದಕ್ಕೂ ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ.