ಆಂಪಿಯಸ್ಮ ಸ್ಟೊಲಾಟ ಅನ್ನೋದು ಇದರ ವೈಜ್ಞಾನಿಕ ಹೆಸರು. ಇವು ವಿಷರಹಿತ ಹಾವುಗಳು, ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ.

ಉಡುಪಿಯ ಪುತ್ತೂರಿನಲ್ಲಿ ಅಪರೂಪದ ದೃಶ್ಯಾವಳಿಯೊಂದು ಕಂಡು ಬಂತು, ಕಲ್ಲಿನ ಸಂಧಿಯಲ್ಲಿ ರಾಶಿ ರಾಶಿ ಹಾವುಗಳು ಗಿಜಿಗಿಡುವ ದೃಶ್ಯ. ಸಿನಿಮಾಗಳಲ್ಲಿ ಹಾವುಗಳು ರಾಶಿಬಿದ್ದು ನಿಧಿರಕ್ಷಣೆ ಮಾಡ್ತಾವಲ್ಲ, ಹಾಗೆ ಭಯಾನಕವಾಗಿತ್ತು ದೃಶ್ಯ. ಸ್ಥಳಕ್ಕೆ ತೆರಳಿದ ಉರಗ ತಜ್ಞ ಗುರುರಾಜ ಸನಿಲ್ ಈ ಹಾವಿನ ಗುಂಪಿನ ಬಗ್ಗೆ ಅಪರೂಪದ ಮಾಹಿತಿಗಳನ್ನು ನೀಡಿದ್ದಾರೆ. ಇದು ಅಪರೂಪದ ಮಿಲನಕ್ರಿಯೆಯ ದೃಶ್ಯ. ಈ ಹಾವುಗಳು ಅತ್ಯಂತ ಸಾಧು ಸ್ವಭಾವದವು. ಕನ್ನಡದಲ್ಲಿ ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ ಅಂತ ಕರೀತಾರೆ. ಆಂಪಿಯಸ್ಮ ಸ್ಟೊಲಾಟ ಅನ್ನೋದು ಇದರ ವೈಜ್ಞಾನಿಕ ಹೆಸರು. ಇವು ವಿಷರಹಿತ ಹಾವುಗಳು, ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ.

ಸಾಮಾನ್ಯವಾಗಿ ಗಾರ್ಡನ್, ತೋಟ ಹೊಲ ಗದ್ದೆಗಳಲ್ಲಿ ಇರ್ತವೆ. ಒಂದು ವಿಶೇಷದ ಸಂಗತಿಯೆಂದರೆ ಈ ಹಾವು ಘಾಸಿಗೊಂಡರೆ ತಕ್ಷಣ ಫೆರೋಮೆನ್ ಅನ್ನೋ ವಾಸನಾ ದ್ರವ್ಯ ಬಿಡುಗಡೆ ಮಾಡುತ್ತದೆ. ಈ ವಾಸನೆಗೆ ಆಕರ್ಷಣೆಗೊಂಡು ಅದೇ ಜಾತಿಯ ಹಲವು ಹಾವುಗಳು ಬಂದು ಸೇರುತ್ತವೆ. ಮಾರ್ಚ್ ನಿಂದ ನವೆಂಬರ್ ವರೆಗೆ ಇವುಗಳ ಸಂತಾನೋತ್ಪತ್ತಿಯ ಕಾಲ. ಅದರಲ್ಲೂ ಆಗಸ್ಟ್ -ಸೆಪ್ಟಂಬರ್ ತಿಂಗಳಲ್ಲಿ ಮಿಲನಕ್ರಿಯೆಯಲ್ಲಿ ತೊಡಗುತ್ತವೆ. ಒಂದು ಹೆಣ್ಣಿನೊಂದಿಗೆ ಹಲವು ಗಂಡು ಹಾವುಗಳು ಕಂಡುಬರುತ್ತವೆ. ಹಾಗಾಗಿ ಈ ರೀತಿ ರಾಶಿ ಹಾವುಗಳು ಕಂಡರೆ ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಅವುಗಳಿಗೆ ತೊಂದರೆ ಮಾಡದೆ ಹಾಗೆಯೇ ಬಿಟ್ಟರೆ ಪರಿಸರಕ್ಕೆ ಅನೇಕ ಅನುಕೂಲಗಳಿವೆ.