ಬಳ್ಳಾರಿ: ರಾಜ್ಯ ಸಭೆಯಲ್ಲಿ ಈ ವರ್ಷ ರಾಮಮಂದಿರ ನಿರ್ಮಾಣಕ್ಕೆ ಅಂಕಿತ ದೊರೆಯಲಿದೆ. ಇಷ್ಟು ವರ್ಷಗಳ ಕಾಲ ಬಹುಮತ ಇಲ್ಲದ ಕಾರಣ ತಡವಾಗಿದ್ದು, ಈ ವರ್ಷ ಬಹುಮತದ ವಿಶ್ವಾಸವಿದೆ ಎಂದು ಪೇಜಾವರ ಶ್ರೀಗಳು ಹೇಳಿದರು. 

ಬಳ್ಳಾರಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು ದೇಶದಲ್ಲಿ ಮುಂದಿನ ಐದು ವರ್ಷಗಳ ಕಾಲ ಬಿಜೆಪಿ ಆಡಳಿತದಲ್ಲಿ ಇರುವ ಕಾರಣ ರಾಮಮಂದಿರ ನಿರ್ಮಾಣ ಖಚಿತವಾಗಿ ಆಗುತ್ತದೆ. ಅಲ್ಲದೇ ಕೋರ್ಟ್ ತೀರ್ಪು ನಮ್ಮ ಪರ ಬರಲಿದೆ ಎಂದರು. 

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು ರಾಷ್ಟ್ರ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಬೇಸರವಿದೆ. ಬಾಂಗ್ಲಾ ವಲಸಿಗರಿಗೆ ಮಮತಾ ಬೆಂಬಲ ನೀಡುತ್ತಿದ್ದಾರೆ.   ಅವರ ಮೇಲೆ ನಮಗೆ ಬೇಸರವಿದ್ದು, ಬಹುಮತಕ್ಕಾಗಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು ರಾಜ್ಯ ಸರ್ಕಾರದಲ್ಲಿ ಗೊಂದಲ ಇರಲಿದೆ ಎಂದು ತಾವು ಈ ಮೊದಲೆ ಹೇಳಿದ್ದು,  ಎರಡೂ ಪಕ್ಷಗಳು ಸೇರಿ ಸರ್ಕಾರ ನಡೆಸುತ್ತಿವೆ. ಆದರೆ ಬಿಜೆಪಿಯನ್ನೂ ಸೇರಿಸಿಕೊಂಡು ಸರಕಾರ ಮಾಡಬಹುದು.  ಬಿಜೆಪಿಯೂ ಕೂಡ ಸಂವಿಧಾನವನ್ನು ಒಪ್ಪಿಕೊಂಡಿದೆ. ಬಿಜೆಪಿಯೂ ಕೂಡ ಜಾತ್ಯಾತೀತ ಪಕ್ಷವಾಗಿದ್ದು, ಮೂರು ಪಕ್ಷಗಳು ಸೇರಿ ರಾಜ್ಯದಲ್ಲಿ ಅಧಿಕಾರ ನಡೆಸಬೇಕು ಎಂದರು.