ಮುಂಬೈ(ಜೂ.15): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತನ್ನ ಪಟ್ಟು ಬಿಗಿಗೊಳಿಸಿರುವ ಶಿವಸೇನೆ, ನಿತ್ಯವೂ ರಾಮ ಮಂದಿರದ ಶಪಥ ನೆನಪಿಸುತ್ತಾ ಬಿಜೆಪಿಯನ್ನು ಕಾಡುತ್ತಿದೆ.

ಈ ಮಧ್ಯೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಪಕ್ಷದ ಸಂಸದರು ನಾಳೆ(ಜೂ.16) ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮಲಲ್ಲಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, ರಾಮ ಮಂದಿರ ರಾಜಕೀಯದ ವಿಷಯವಲ್ಲ ಬದಲಿಗೆ ನಂಬಿಕೆಯ ಸಂಕೇತ ಎಂದು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣದ ಶಪಥ ಮಾಡಿರುವ ಬಿಜೆಪಿ, ತನ್ನ ವಾಗ್ದಾನವನ್ನು ಪೂರ್ಣಗೊಳೊಸುವ ಜವಾಬ್ದಾರಿ ಹೊರಬೇಕು ಎಂದು ಸಂಜಯ್ ರಾವತ್ ಆಗ್ರಹಿಸಿದ್ದಾರೆ.

2020ರ ವೇಳೆಗೆ ಬಿಜೆಪಿ ರಾಜ್ಯ ಸಭೆಯಲ್ಲಿ ಬಹುಮತ ಗಳಿಸಲಿದ್ದು, ಅಷ್ಟರಲ್ಲಿ ರಾಮಮಂದಿರ ನಿರ್ಮಾಣಕ್ಕಿರುವ ಎಲ್ಲಾ ಅಡೆತಡೆಗಳನ್ನು ನಿವಾರಣೆಯಾಗಲಿವೆ ಎಂದು ಶಿವಸೇನೆ ವಿಶ್ವಾಸ ವ್ಯಕ್ತಪಡಿಸಿದೆ.

ಈ ವೇಳೆ ರಾಮಮಂದಿರ ಭೇಟಿ ವೇಳೆ ಉದ್ಧವ್ ಠಾಕ್ರೆ ಮತ್ತು ಶಿವಸೇನೆ ಸಂಸದರು ಅಯೋಧ್ಯೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಸಕಲ ವ್ಯವಸ್ಥೆ ಕಲ್ಪಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.