ಬ್ರಿಟನ್ ಎಲೆಕ್ಷನ್: ಇಬ್ಬರು ಕನ್ನಡಿಗರ ಆಯ್ಕೆ
ಬ್ರಿಟನ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಬ್ಬರು ಕನ್ನಡಿಗರ ಆಯ್ಕೆ| ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೆಟಿವ್ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಕುಮಾರ್ ನಾಯ್ಕ್|
ಲಂಡನ್/ಚಿತ್ರದುರ್ಗ[ಏ.04]: ಇಲ್ಲಿನ ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೆಟಿವ್ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಕುಮಾರ್ ನಾಯ್ಕ್ ಲೇಬರ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದ ಡಾ.ಕುಮಾರ್ ನಾಯ್‌್ಕ ಮೂಳೆವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಮತ್ತೊಬ್ಬ ಕನ್ನಡಿಗ ಸ್ವಿಂಡನ್ ವೆಸ್ಟಿಯಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದ ಸುರೇಶ ಗಟ್ಟಾಪುರ ಸಹ ಪುನರಾಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಟನ್ನಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಬ್ಬರು ಕನ್ನಡಿಗರು ಜಯಭೇರಿ ಬಾರಿಸಿದಂತಾಗಿದೆ.
ಹೋಗ್ಲಿ ಬಿಡಿ ಅವ್ನ ಆಸೆ ತೀರ್ತು: ಪುತ್ರ ಡಾ.ಕುಮಾರನಾಯ್ಕ ಗೆಲುವಿನ ಕುರಿತು ತಂದೆ ತಿಪ್ಪೇಸ್ವಾಮಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ‘‘ನನ್ ಮಗ ಸ್ವೀಡನ್ ಎಲೆಕ್ಷನ್‌ನಲ್ಲಿ ನಿಂತು ಗೆದ್ನಾ, ಹೋಗ್ಲಿ ಬಿಡಿ ಅವ್ನ ಆಸೆ ತೀರ್ತು...’’ ಎಂದು ಹೇಳಿದ್ದಾರೆ.
ಕುಮಾರನಾಯ್ಕ್ ಗೆದ್ದಾಗ ಅವರ ತಂದೆ ತಿಪ್ಪೇಸ್ವಾಮಿ ನಾಯ್ಕ ಮೈಸೂರು ಜಿಲ್ಲೆಯ ಹುಣಸೂರಿನ ತೋಟದಲ್ಲಿದ್ದರು. ಡಾ.ಕುಮಾರನಾಯ್ಕ ಅಲ್ಲಿ ಜಮೀನು ತೆಗೆದುಕೊಂಡಿದ್ದು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮಗ ಚುನಾವಣೆಯಲ್ಲಿ ಗೆದ್ದಿದ್ದಾನೆ ಎಂಬ ವಿಷಯ ‘ಕನ್ನಡಪ್ರಭ’ ತಿಳಿಸಿದಾಗ ಅಯ್ಯೋ, ಇಲ್ಲಿ ಕರೆಂಟು ಇಲ್ಲ, ಟಿವಿ ಬರೋಲ್ಲ... ಅಂತಹ ಜಾಗದಲ್ಲಿದ್ದೇನೆ ಅಂದ್ರು. ಗೆದ್ದಿರುವ ವಿಷಯ ಕೇಳಿ ತುಂಬಾ ಸಂತೋಷ ಆಯ್ತು. ಅವನಿಗೆ ಮೊದಲಿನಿಂದಲೂ ಎಲೆಕ್ಷನ್‌ಗೆ ನಿಲ್ಲಬೇಕೆಂಬ ಹುಚ್ಚು ಇತ್ತು. ‘ಹೊಳಲ್ಕೆರೆ ಮೀಸಲು ಕ್ಷೇತ್ರದಿಂದ ನಿಲ್ತೀನಿ ಅಂದಿದ್ದ. ಬೇಡಪ್ಪಾ, ಕೋಟಿಗಟ್ಟಲೆ ದುಡ್ಡು ಬೇಕು, ಸುಮ್ನೆ ಯಾಕೆ ಖರ್ಚು ಮಾಡ್ತೀಯಾ ಅಂತ ಹೇಳಿದ್ದೆ. ಅಲ್ಲಿ ಹೋಗಿ ಗೆದ್ದಿದ್ದಾನೆ ನೋಡಿ’ ಎಂದು ತುಸು ಬಿಮ್ಮಿನಿಂದಲೇ ಹೇಳಿದ್ರು.
ಕಳೆದ ವರ್ಷ ನಟ ಉಪೇಂದ್ರ ಸ್ವೀಡನ್‌ಗೆ ಹೋಗಿದ್ದಾಗ ಡಾ.ಕುಮಾರನಾಯ್ಕ ಅವರ ಮನೆಗೆ ಭೇಟಿ ನೀಡಿದ್ದರಂತೆ. ನಮ್ಮ ಪಕ್ಷದಿಂದಲೇ ಎಲೆಕ್ಷನ್‌ಗೆ ಸ್ಪರ್ಧೆ ಮಾಡು ಎಂದು ಉಪೇಂದ್ರ ಹೇಳಿದ್ದರಂತೆ. ನಾನಂತೂ ಯಾವುದೇ ಕಾರಣಕ್ಕೂ ಇಲ್ಲಿಗೆ ಬಂದು ಎಲೆಕ್ಷನ್ ಆಡಬೇಡ. ಸುಮ್ನೆ ಆರಾಮವಾಗಿ ಡಾಕ್ಟರ್ ಆಗಿದ್ದೀಯ, ಕೆಲಸ ಮಾಡಿಕೊಂಡು ಸುಮ್ಕಿರು ಎಂದು ಸಲಹೆ ನೀಡಿದ್ದೆ ಎಂದು ತಿಪ್ಪೇಸ್ವಾಮಿ ನಾಯ್ಕ ಹೇಳಿದರು.
ಅಂದಹಾಗೆ ಡಾ. ಕುಮಾರನಾಯ್ಕಗೆ ಸಿನಿಮಾ ಹುಚ್ಚು ಕೂಡಾ ಇದೆಯಂತೆ. ಸಾಧುಕೋಕಿಲ ಸೇರಿದಂತೆ ಇತರೆ ನಟರನ್ನು ಹಾಕಿಕೊಂಡು ಲಂಡನ್‌ನಲ್ಲಿ ಲಂಭೋದರಾ ಎನ್ನುವ ಸಿನಿಮಾ ತೆಗೆದಿದ್ದಾರಂತೆ. ಅದರಲ್ಲಿ ಕುಮಾರನಾಯ್ಕ ಕೂಡಾ ಪಾತ್ರ ಮಾಡಿದ್ದರಂತೆ. ಅದು ಎಷ್ಟುದಿನ ಓಡ್ತೋ ಗೊತ್ತಿಲ್ಲ, ತುಂಬಾ ಕಾಮಿಡಿಯಾಗಿತ್ತು ಎಂದು ತಂದೆ ತಿಪ್ಪೇಸ್ವಾಮಿ ನಾಯ್ಕ ತಿಳಿಸಿದರು. ಕುಮಾರನಾಯ್ಕ ಮೈಸೂರಿನ ವೈದ್ಯೆ ಡಾ.ಕವಿತಾ ಎಂಬುವರ ವಿವಾಹವಾಗಿದ್ದಾರೆ. ಅವರೂ ಸ್ವೀಡನ್‌ನಲ್ಲಿ ವೈದ್ಯರಾಗಿದ್ದಾರೆ.