Asianet Suvarna News Asianet Suvarna News

ಇಸ್ಲಾಮಿಕ್ ಸ್ಟೇಟ್'ಗೆ ನೆರವು ನೀಡಿದ ಆರೋಪ: ಇಬ್ಬರಿಗೆ ಜೈಲುಶಿಕ್ಷೆ

ಹಲವು ಇಮೇಲ್ ಐಡಿಗಳು, ವಿವಿಧ ದೇಶಗಳ ಮೊಬೈಲ್ ನಂಬರ್'ಗಳು ಇತ್ಯಾದಿಗಳ ನೆರವಿನಿಂದ ಆನ್'ಲೈನ್ ಫೋರಂ ಮತ್ತು ಗ್ರೂಪ್'ಗಳನ್ನು ರಚಿಸಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಪ್ರಚಾರ ಕಾರ್ಯದಲ್ಲಿ ಈ ಆರೋಪಿಗಳು ನಿರತರಾಗಿದ್ದರು. ಫೇಸ್'ಬುಕ್, ವಾಟ್ಸಾಪ್, ಕಿಕ್(KiK) VKontakte, ವೈಬರ್, ಸ್ಕೈಪ್'ಗಳಲ್ಲಿ ಈ ಉಗ್ರ ಸಹಾಯಕರು ಸಕ್ರಿಯವಾಗಿದ್ದರೆನ್ನಲಾಗಿದೆ.

two gets 7 yrs imprisonment in isis related case in india

ನವದೆಹಲಿ(ಏ. 21): ಉಗ್ರರಿಗೆ ಜನ-ಧನ ಬಲ ಒದಗಿಸಿದ ಆಪಾದನೆಯ ಮೇಲೆ ಇಬ್ಬರಿಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸಂಬಂದ ಭಾರತದಲ್ಲಿ ಕೋರ್ಟ್ ಶಿಕ್ಷೆ ವಿಧಿಸಿರುವ ಮೊದಲ ಪ್ರಕರಣ ಇದಾಗಿದೆ. ಜಮ್ಮು-ಕಾಶ್ಮೀರದ ಅಜರುಲ್ ಇಸ್ಲಾಮ್(24) ಮತ್ತು ಮಹಾರಾಷ್ಟ್ರದ ಮೊಹಮ್ಮದ್ ಫರ್ಹಾನ್ ಶೇಖ್(25) ಅವರಿಗೆ ಜಿಲ್ಲಾ ನ್ಯಾಯಾಧೀಶ ಅಮರ್'ನಾಥ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ನಿಧಿ ಸಂಗ್ರಹಿಸಲು ಹಾಗೂ ಜನರನ್ನು ನೇಮಕ ಮಾಡಲು ಇವರಿಬ್ಬರು ಸೇರಿದಂತೆ ಮೂವರ ವಿರುದ್ಧ ಎನ್'ಐಎ ತನಿಖಾ ದಳವು ಕಳೆದ ವರ್ಷದ ಜ.28ರಂದು ಆರೋಪ ದಾಖಲು ಮಾಡಿತ್ತು. ಮೂರನೇ ಆರೋಪಿಯಾಗಿರುವ ಅದ್ನಾನ್ ಹಸನ್(36) ವಿರುದ್ಧದ ವಿಚಾರಣೆ ಇದೇ ಕೋರ್ಟ್'ನಲ್ಲಿ ಪ್ರತ್ಯೇಕವಾಗಿ ನಡೆಯುತ್ತಿದೆ.

ಹಲವು ಇಮೇಲ್ ಐಡಿಗಳು, ವಿವಿಧ ದೇಶಗಳ ಮೊಬೈಲ್ ನಂಬರ್'ಗಳು ಇತ್ಯಾದಿಗಳ ನೆರವಿನಿಂದ ಆನ್'ಲೈನ್ ಫೋರಂ ಮತ್ತು ಗ್ರೂಪ್'ಗಳನ್ನು ರಚಿಸಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಪ್ರಚಾರ ಕಾರ್ಯದಲ್ಲಿ ಈ ಆರೋಪಿಗಳು ನಿರತರಾಗಿದ್ದರು. ಫೇಸ್'ಬುಕ್, ವಾಟ್ಸಾಪ್, ಕಿಕ್(KiK) VKontakte, ವೈಬರ್, ಸ್ಕೈಪ್'ಗಳಲ್ಲಿ ಈ ಉಗ್ರ ಸಹಾಯಕರು ಸಕ್ರಿಯವಾಗಿದ್ದರೆನ್ನಲಾಗಿದೆ. ಸೋಷಿಯಲ್ ಮೀಡಿಯಾ ಮತ್ತು ಆನ್'ಲೈನ್ ಗ್ರೂಪ್'ಗಳ ಮೂಲಕ ಸಂಘಟನೆಗೆ ಜನರನ್ನ ಸೆಳೆಯುವ ಕೆಲಸ ಇವರದ್ದಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಆರೋಪಪಟ್ಟಿಯಲ್ಲಿ ವಿವರಿಸಿತ್ತು.

ಕೋರ್ಟ್'ನಲ್ಲಿ ಆರೋಪಪಟ್ಟಿ ದಾಖಲಾದ ಹಲವು ದಿನಗಳ ಬಳಿಕ ಆರೋಪಿಗಳು ಕೋರ್ಟ್'ನಲ್ಲಿ ತಪ್ಪೊಪ್ಪಿಗೆ ನೀಡಿದ್ದರು. "ಇವರಿಗೆ ತಮ್ಮ ಕೃತ್ಯಗಳಿಂದ ಪಶ್ಚಾತಾಪವಿದೆ. ಇವರ ವಿರುದ್ಧ ಈ ಮುಂಚೆ ಯಾವುದೇ ಕ್ರಿಮಿನಲ್ ರೆಕಾರ್ಡ್ ಇಲ್ಲ. ಇವರು ಸಮಾಜದ ಮುಖ್ಯವಾಹಿನಿಗೆ ಸೇರಿಕೊಂಡು ಏನಾದರೂ ಒಳ್ಳೆಯದನ್ನು ಮಾಡುವ ತುಡಿತ ಹೊಂದಿದ್ದಾರೆ," ಎಂದು ಆರೋಪಿಗಳ ಪರವಾಗಿ ವಕೀಲರು ಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ, ಇಬ್ಬರು ಆಪಾದಿತರಿಗೆ ಗರಿಷ್ಠ ಶಿಕ್ಷೆಯ ಬದಲು 7 ವರ್ಷ ಸಜೆ ವಿಧಿಸಲಾಗಿದೆ.

(ಮಾಹಿತಿ: ಪಿಟಿಐ ಸುದ್ದಿಸಂಸ್ಥೆ)

Follow Us:
Download App:
  • android
  • ios