ಬೆಂಗಳೂರು (ಮೇ. 01): ಇತ್ತೀಚೆಗಷ್ಟೇ ಫೇಸ್‌ಬುಕ್‌ನ ದತ್ತಾಂಶ ಹಗರಣ ಬೆಳಕಿಗೆ ಬಂದು ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದ  ಬೆನ್ನಲ್ಲೇ ಇನ್ನೊಂದು ಸಾಮಾಜಿಕ ಜಾಲತಾಣ ಟ್ವೀಟರ್ ಕೂಡ ಬಳಕೆದಾರರ ದತ್ತಾಂಶ ಮಾರಾಟ ಮಾಡಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಕೇಂಬ್ರಿಜ್ ಅನಾಲಿಟಿಕಾ ಕಂಪನಿಗೆ ಫೇಸ್‌ಬುಕ್‌ನ ಬಳಕೆದಾರರ ವೈಯಕ್ತಿಕ ಮಾಹಿತಿ ಕದ್ದು ಮಾರಾಟ ಮಾಡಿದ್ದ ಸಂಶೋಧಕ ಅಲೆಕ್ಸಾಂಡರ್ ಕೋಗನ್ ಹಾಗೂ ಆತನ  ಕಂಪನಿ ಗ್ಲೋಬಲ್ ಸೈನ್ಸ್ ರೀಸರ್ಚ್‌ಗೇ ಟ್ವೀಟರ್ ಕೂಡ ಬಳಕೆದಾರರ ಖಾಸಗಿ ಮಾಹಿತಿ ಮಾರಾಟ ಮಾಡಿದೆ ಎಂದು ಬ್ರಿಟನ್ನಿನ ದಿ ಸಂಡೇ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

2015 ರಲ್ಲಿ ಒಂದು ದಿನದ ಮಟ್ಟಿಗೆ ಟ್ವೀಟರ್ ಕಂಪನಿಯು ಅಲೆಕ್ಸಾಂಡರ್ ಕೋಗನ್‌ಗೆ ಟ್ವೀಟರ್‌ನ ಖಾಸಗಿ ದತ್ತಾಂಶಗಳನ್ನು ಬಳಸಿಕೊಳ್ಳುವ ಹಕ್ಕು ನೀಡಿತ್ತು. ಇದಕ್ಕಾಗಿ ಆತನಿಂದ ಹಣ ಪಡೆದಿತ್ತು. ಆತ ಒಂದು ದಿನದಲ್ಲಿ 2014 ರ ಡಿಸೆಂಬರ್ ಹಾಗೂ 2015 ರ ಏಪ್ರಿಲ್ ನಡುವಿನ ಸಾರ್ವಜನಿಕ ಟ್ವೀಟ್‌ಗಳ ಯಾದೃಚ್ಛಿಕ ಮಾದರಿ (ರ‌್ಯಾಂಡಮ್ ಸ್ಯಾಂಪಲ್)  ಸಂಗ್ರಹಿಸಿಕೊಂಡಿದ್ದ. ನಂತರ ಇದನ್ನು ಆತ ಫೇಸ್ ಬುಕ್‌ನಿಂದ ಕದ್ದ ಮಾಹಿತಿಯ ಜೊತೆ ತಾಳೆ ಹಾಕಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಈ ಕುರಿತು ಕೋಗನ್ ಸ್ವತಃ ಪ್ರತಿಕ್ರಿಯೆ ನೀಡಿದ್ದು, ತಾನು ಟ್ವೀಟರ್‌ನ ದತ್ತಾಂಶವನ್ನು ಕೇವಲ ಬ್ರ್ಯಾಂಡ್ ರಿಪೋರ್ಟ್ ಹಾಗೂ ಸಮೀಕ್ಷೆಯ  ವಿಸ್ತರಿತ ಟೂಲ್ ತಯಾರಿಸಲು ಬಳಸಿದ್ದೇನೆ. ಇದರಿಂದ ನಿಯಮ ಉಲ್ಲಂಘನೆಯಾಗಿಲ್ಲ ಎಂದಿದ್ದಾನೆ. ಫೇಸ್‌ಬುಕ್‌ನಿಂದ ಕದ್ದ ಜನರ ವೈಯಕ್ತಿಕ ಮಾಹಿತಿಯನ್ನು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಅಧ್ಯಕ್ಷೀಯ ಚುನಾವಣೆಯೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳ  ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಕೇಂಬ್ರಿಜ್ ಅನಾಲಿಟಿಕಾ ಕಂಪನಿ ಬಳಸಿಕೊಂಡಿತ್ತು. ಇದೇ ಉದ್ದೇಶಕ್ಕೆ ಟ್ವೀಟರ್‌ನ  ದತ್ತಾಂಶವನ್ನೂ ಬಳಸಿಕೊಂಡಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.