ಈ ಬಾರಿಯ ಮಹಾಮಳೆಯಿಂದಾಗಿ ಕರ್ನಾಟಕ ಕರಾವಳಿಯು ಕೂಡಾ ರಾಜ್ಯ ರಾಜಧಾನಿಯಿಂದ  ಬಹುತೇಕ ಸಂಪರ್ಕವನ್ನು ಕಳೆದುಕೊಂಡಿದೆ. ರಾಜ್ಯದ ಪ್ರಮುಖ ನಗರವಾಗಿರುವ  ಮಂಗಳೂರು ತಲುಪಲು  ಪಶ್ಚಿಮ ಘಟ್ಟದಿಂದ ಹಾದು ಹೋಗಲೇ ಬೇಕು. ಆದರೆ ರೈಲು ಮತ್ತು ರಸ್ತೆ ಮಾರ್ಗ ಮುಚ್ಚಿ ಹೋಗಿದ್ದು, ಪರ್ಯಾಯ ರಸ್ತೆಯನ್ನು ಅವಲಂಬಿಸೋಣವೆಂದರೆ, ಅವುಗಳ ಗೋಳು ಬೇರೆನೇ!

ಮಂಗಳೂರು ತಲುಪಲು ಪ್ರಮುಖವಾಗಿರುವ ರೈಲು ಮಾರ್ಗ ಹಾಗೂ ಶಿರಾಡಿ ಘಾಟ್ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯು ಗುಡ್ಡಕುಸಿತದಿಂದ ಮುಚ್ಚಿಹೋಗಿದೆ. ಕೊಡಗಿನಿಂದ ಸಂಪಾಜೆ ಘಾಟಿಯ ಮೂಲಕ  ಹಾದುಹೋಗುವ ಪರ್ಯಾಯ ರಸ್ತೆ  ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.  ಬಾಕಿ ಉಳಿದಿರುವುದು  ಚಾರ್ಮಾಡಿ ಘಾಟಿ ಕೂಡಾ ಬಹಳ ಕಿರಿದಾಗಿದ್ದು, ಗುಡ್ಡ ಕುಸಿತ ಭಯ ಯಾವತ್ತಿಗೂ ಇದ್ದದ್ದೇ.  ಇತರ ಎಲ್ಲಾ ರಸ್ತೆಗಳು ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ  ಈ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಕೂಡಾ ಹೆಚ್ಚಾಗಿದೆ. ಅದ್ಯಾವಾಗ ಬ್ಲಾಕ್ ಆಗುತ್ತೋ, ಅಥವಾ ಮುಚ್ಚಿಹೋಗುತ್ತೋ ಎಂಬ ಭಯದಲ್ಲೇ ಪ್ರಯಾಣಿಕರು ಓಡಾಡುವ ಪರಿಸ್ಥಿತಿ. ಶೃಂಗೇರಿ -ಆಗುಂಬೆ ಘಾಟಿಯ ಮೂಲಕ ಉಡುಪಿ/ಮಂಗಳೂರು ತಲುಪಬಹುದಾದರೂ ಆಗುಂಬೆಯಲ್ಲಿ ದೊಡ್ಡವಾಹನಗಳಿಗೆ ಪ್ರವೇಶವಿಲ್ಲ.  

ಇನ್ನು ಉಳಿದಿದರುವುದು ವಿಮಾನ ಮಾರ್ಗ ಮಾತ್ರ! ಆದರೆ ಜನಸಾಮಾನ್ಯರಿಗೆ ಅದು ಕೈಗೆಟಕದ ಗಗನಕುಸುಮವೇ ಸರಿ. ಕೇರಳ, ಕೊಡಗು ಪ್ರವಾಹ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾದಾಗ, ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಹೆಚ್ಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು, ಮಂಗಳೂರಿಗೆ ಪ್ರಯಾಣಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಮಂದಿ ಬಕ್ರೀದ್ ಸಮಯದಲ್ಲಿ ಊರಿಗೆ ಹೋಗದೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿಗರು ಟ್ವಿಟರ್ ನಲ್ಲಿ #ConnectUsToMangalore ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ಮಂಗಳೂರಿಗೆ ಸಮರ್ಪಕವಾದ ರಸ್ತೆ ಸಂಪರ್ಕವನ್ನು ಕಲ್ಪಿಸಬೇಕೆಂದು ಟ್ವೀಟರ್ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳೂರಿಗರು ಮುಂದಾಗಿದ್ದಾರೆ. 

ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿದ ಅಭಿಯಾನದ ನೇತೃತ್ವವನ್ನು ವಹಿಸಿರುವ ಗೋಪಾಲ್ ಪೈ, ಈ ಅಭಿಯಾನ ಯಾವ ಸರ್ಕಾರದ ವಿರುದ್ಧವೂ ಅಲ್ಲ, ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ.  ಜನಸಾಮಾನ್ಯರು ಪಡುತ್ತಿರುವ ಪಾಡನ್ನು ಸರ್ಕಾರಕ್ಕೆ ಮನವರಿಕೆ ಮಾಡುವುದೇ ಈ ಅಭಿಯಾನದ ಗುರಿ,  ಎಂದು ಹೇಳಿದ್ದಾರೆ.

ಮೊದಲು, ಸುದೀರ್ಘ ಕಾಲ ಕಾಂಕ್ರೀಟಿಕರಣದ ಹಿನ್ನಲೆಯಲ್ಲಿ ಶಿರಾಡಿ ಘಾಟಿ ರಸ್ತೆ ಮುಚ್ಚಲಾಗಿತ್ತು. ಇದೀಗ ಉದ್ಘಾಟನೆಯಾದ ಕೆಲದಿನಗಳಲ್ಲೇ ಗುಡ್ಡಕುಸಿತದ ಕಾರಣವನ್ನು ಮುಂದಿಟ್ಟುಕೊಂಡು ರಸ್ತೆಯನ್ನು ಮುಚ್ಚಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮಂಗಳೂರಿಗೆ ಹೋಗಬೇಕಾದವರು ಏನು ಮಾಡಬೇಕು? ಒಂದಾದರೂ ಸಮರ್ಪಕವಾದ ರಸ್ತೆ ಸೌಲಭ್ಯವನ್ನು ಒದಗಿಸಿಯೆಂಬುವುದೇ ನಮ್ಮ ಮನವಿ, ಎನ್ನುತ್ತಾರೆ ವೃತ್ತಿಯಲ್ಲಿ ಫೈನಾನ್ಶಿಯಲ್ ಅನಾಲಿಸ್ಟ್ ಆಗಿರುವ ಗೋಪಾಲ್ ಪೈ. 

ಆ.24ಕ್ಕೆ [ಶುಕ್ರವಾರ] ಈ ಬಗ್ಗೆ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು,  ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ (@nalinkateel) ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (@CMofKarnataka),  ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ (@nitin_gadkari), ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ (@PiyushGoyal) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (@NHAISocialmedia ) ಹಾಗೂ ಪ್ರಧಾನಿ  ಮೋದಿಗೆ (@PMOIndia ) ಮನವಿ ಮಾಡಲಾಗುವುದೆಂದು, ಗೋಪಾಲ್ ಪೈ ಹೇಳಿದ್ದಾರೆ. 

ಕೊಡಗಿನ ದುರಂತದ ಸಂದರ್ಭದಲ್ಲಿ ಇದೆಲ್ಲಾ ಬೇಕೇ ಎಂದು ಜನ ಪ್ರಶ್ನಿಸುತ್ತಾರೆ. ಕೊಡಗಿನ ನೋವು ನಮ್ಮ ನೋವು . ನಾವೂ ನೆರವನ್ನು ಒದಗಿಸಿದ್ದೇವೆ. ಇನ್ನೂ ಮುಂದೆಯೂ ಅಗತ್ಯ ನೆರವುಗಳನ್ನು ಒದಗಿಸುತ್ತೇವೆ.  ಆದರೆ ಕರಾವಳಿಯ ಜನರ ನೋವನ್ನು ಕಡೆಗಣಿಸುವ ಹಾಗಿಲ್ವಲ್ಲ? ಅವರ ನೋವಿಗೆ ಸ್ಪಂದಿಸುವವರು ಯಾರು? ಎಂದು ಗೋಪಾಲ್ ಪೈ ಕಳಕಳಿ ವ್ಯಕ್ತಪಡಿಸಿದ್ದಾರೆ.