ತುಮಕೂರು, [ಅ.02]: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಹೊಗಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ತೆಗಳಿದ್ದ  ಕೊರಟಗೆರೆ ತಾಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

 ಕೊರಟಗೆರೆ ತಾಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವರುದ್ರಯ್ಯ ಕೆ. ಎಂಬುವರು ಇತ್ತೀಚೆಗೆ ಜಾಲತಾಣದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ತೆಗಳಿ ವಿಡಿಯೋ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು  ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ. ಜ್ಯೋತಿ ಗಣೇಶ್‌ ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.

ಯಡಿಯೂರಪ್ಪ ಮಾಸ್‌ ಲೀಡರ್‌, ಅವರಂತೆ ಜನ ಸಂಘಟನೆ ಮಾಡೋರು ರಾಜ್ಯದಲ್ಲಿ ಯಾರೂ ಇಲ್ಲ. ಯಡಿಯೂರಪ್ಪ ಒಂದು ಗ್ರಾಮಕ್ಕೆ ಹೋದ್ರೆ 5 ಸಾವಿರ ಜನ ಕಾರ್ಯಕರ್ತರು ಸೇರುತ್ತಾರೆ. ಆದರೆ ನಳಿನ್‌ಕುಮಾರ್‌ ಕಟೀಲ್‌ ಬಂದರೆ 5 ಜನರೂ ಸೇರುವುದಿಲ್ಲ. ಯಡಿಯೂರಪ್ಪರಿಗೆ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡುತ್ತಿಲ್ಲ ಅಂತೆಲ್ಲ ಶಿವರುದ್ರಯ್ಯ ವಿಡಿಯೋನಲ್ಲಿ ಹೇಳಿದ್ದರು. ಇದೇ ಕಾರಣಕ್ಕೆ ಶಿವರುದ್ರಯ್ಯ ಪಕ್ಷದಿಂದಲೇ ಉಚ್ಛಾಟನೆಗೊಂಡಿದ್ದಾರೆ.

ಮೊದಲೇ ಕಟೀಲ್ ಹಾಗೂ ಬಿಎಸ್ ವೈ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದು ಮಂಗಳವಾರ ನಡೆದ ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಜಗಜ್ಜಾಹೀರಾಗಿದೆ. ಕಟೀಲ್ ಅವರು ಗೌತಮ್ ಜೈನ್ ಅವರನ್ನು ಅಂತಿಮಗೊಳಿಸಿದ್ರೆ, ಬಿಎಸ್ ವೈ ಪದ್ಮನಾಭರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಿದ್ದರು. 

ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಸಭೆಯಲ್ಲಿ ನಿಗಮ ಮಂಡಳಿ ನಿಯಮ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಮಾತುಗಳು ತಾರಕಕ್ಕೇರಿದ್ದವು.