ತಮಿಳುನಾಡಲ್ಲಿ ಮತ್ತೊಮ್ಮೆ ರಾಜಕೀಯ ಅಲ್ಲೋಲ ಕಲ್ಲೋಲ ಶುರುವಾಗಿದೆ. ಉಚ್ಚಾಟಿತ ಮುಖಂಡ ಟಿಟಿವಿ ದಿನಕರನ್‌ ಬೆಂಬಲಿಗರಾಗಿರುವ 18 ಮಂದಿ ಎಐಎಡಿಎಂಕೆ ಶಾಸಕರನ್ನು ತಮಿಳುನಾಡು ಸ್ಪೀಕರ್‌ ಪಿ. ಧನಪಾಲ್‌ ಸಸ್ಪೆಂಡ್​​ ಮಾಡಿದ್ದಾರೆ.

ಬೆಂಗಳೂರು (ಸೆ.18): ತಮಿಳುನಾಡಲ್ಲಿ ಮತ್ತೊಮ್ಮೆ ರಾಜಕೀಯ ಅಲ್ಲೋಲ ಕಲ್ಲೋಲ ಶುರುವಾಗಿದೆ. ಉಚ್ಚಾಟಿತ ಮುಖಂಡ ಟಿಟಿವಿ ದಿನಕರನ್‌ ಬೆಂಬಲಿಗರಾಗಿರುವ 18 ಮಂದಿ ಎಐಎಡಿಎಂಕೆ ಶಾಸಕರನ್ನು ತಮಿಳುನಾಡು ಸ್ಪೀಕರ್‌ ಪಿ. ಧನಪಾಲ್‌ ಸಸ್ಪೆಂಡ್​​ ಮಾಡಿದ್ದಾರೆ.

 ಸಂವಿಧಾನದ 10ನೇ ಪರಿಚ್ಛೇದದಲ್ಲಿ ಸೂಚಿಸಲಾದ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಈ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಸಂವಿಧಾನದ 10ನೇ ವಿಧಿಯಂತೆ ಸ್ಪೀಕರ್‌ ಈ ಶಾಸಕರನ್ನು ಅನರ್ಹಗೊಳಿಸಿದ್ದು, ವಿಧಾನಸಭೆಯ ಸದಸ್ಯತ್ವ ಕಳೆದುಕೊಂಡಿದ್ದಾರೆ ವಿಧಾನಸಭೆ ಕಾರ್ಯದರ್ಶಿ ಕೆ. ಭೂಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಲ್ಲ ಬಂಡುಕೋರ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್‌ ನೋಟೀಸ್‌ ನೀಡಿದ್ದರು. ಆದರೆ ಒಂದಿಬ್ಬರನ್ನು ಹೊರತಪಡಿಸಿ ಬೇರೆ ಯಾರೂ ಹಾಜರಾಗಿರಲಿಲ್ಲ. ಕಳೆದ ತಿಂಗಳು ದಿನಕರನ್‌ ಬಣಕ್ಕೆ ಸೇರಿದ 19 ಶಾಸಕರು ರಾಜ್ಯಪಾಲ ಸಿ. ವಿದ್ಯಾಸಾಗರ್‌ ರಾವ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸರಕಾರಕ್ಕೆ ನೀಡಿದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

 18 ಶಾಸಕರ ಅನರ್ಹತೆಯೊಂದಿಗೆ ಎಐಎಡಿಎಂಕೆ ಬಲ 116ಕ್ಕೆ ಕುಸಿದಿದೆ. ಡಿಎಂಕೆ 89, ಕಾಂಗ್ರೆಸ್‌ 8 ಹಾಗೂ ಐಯುಎಂಎಲ್‌ ಒಬ್ಬ ಸದಸ್ಯರನ್ನು ಹೊಂದಿವೆ. ಒಟ್ಟು 234 ಸದಸ್ಯ ಬಲದ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್‌.ಕೆ ನಗರ್‌ ಕ್ಷೇತ್ರ ಖಾಲಿ ಬಿದ್ದಿದೆ. 19 ಶಾಸಕರ ಅನರ್ಹತೆಯ ಬಳಿಕ ಇದೀಗ 19 ಕ್ಷೇತ್ರಗಳು ಖಾಲಿ ಬಿದ್ದಂತಾಗಿದೆ. ಹೀಗಾಗಿ ವಿಧಾನಸಭೆಯ ಒಟ್ಟು ಬಲ 215ಕ್ಕೆ ಕುಸಿದಂತಾಗಿದೆ. ಸರಕಾರ ಬಹುಮತ ಸಾಬೀತುಪಡಿಸಲು 108 ಸಂಖ್ಯಾಬಲ ತೋರಿಸಿದರೆ ಸಾಕಾಗುತ್ತದೆ. ಈ ಮಧ್ಯೆ ಸ್ಪೀಕರ್‌ ತೀರ್ಪು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗುವುದಾಗಿ ಟಿಟಿವಿ ದಿನಕರ್‌ ಬಣ ಹೇಳಿದೆ. ಶಾಸಕರನ್ನು ಅನರ್ಹಗೊಳಿಸುವ ಮೂಲಕ ಇಪಿಎಸ್‌ ಸರಕಾರ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ. ಸ್ಪೀಕರ್‌ ತೀರ್ಪನ್ನು ನಾವು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಅನರ್ಹಗೊಂಡ ಶಾಸಕರು ಹೇಳಿದ್ದಾರೆ.