ಚೆನ್ನೈ[ಸೆ.12]: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಘಟನೆಯೊಂದು ಬಹುತೇಕರನ್ನು ಬೆಚ್ಚಿ ಬೀಳಿಸಿದೆ. 24 ವರ್ಷದ ಯುವಕನನ್ನು ಆತನ ಇಬ್ಬರು ಪತ್ನಿಯರು ನಡು ರಸ್ತೆಯಲ್ಲೇ ಥಳಿಸಿದ್ದಾರೆ. ಇಬ್ಬರು ಪತ್ನಿಯರಿಗೆ ತಮ್ಮ ಗಂಡ ಮೂರನೇ ಮದುವೆಯಾಗುವ ತಯಾರಿ ನಡೆಸುತ್ತಿದ್ದಾನೆಂದು ತಿಳಿದಾಗ ಚಪ್ಪಲಿ ಏಟು ನಿಡಲಾರಂಭಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಎಸ್ ಅರವಿಂದ್ ದಿನೇಶ್ 2016ರಲ್ಲಿ ಪ್ರಿಯದರ್ಶಿನಿ ಎಂಬಕೆಯನ್ನು ಮದುವೆಯಾಗಿದ್ದ. ಆದರೆ ಮದುವೆ ಬಳಿಕ ಆತ ಪ್ರಿಯದರ್ಶಿನಿಯೊಂದಿಗೆ ಕೀಳಾಗಿ ನಡೆದುಕೊಳ್ಳಲಾರಂಭಿಸಿದ್ದ. ಇದರಿಂದ ಬೇಸತ್ತ ಪ್ರಿಯದರ್ಶಿನಿ ಈ ವಿಚಾರವನ್ನು ದಿನೇಶ್ ತಂದೆ-ತಾಯಿಗೆ ತಿಳಿಸಿದಾಗ, ಅವರು ಕೂಡಾ ಇದನ್ನು ಕಡೆಗಣಿಸಿದ್ದಾರೆ. 

ಆದರೆ ಗಂಡನ ಕಿರುಕುಳ ಕೊನೆಯಾಗದಿರುವುದನ್ನು ಮನಗಂಡ ಪತ್ನಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಹಾಗೂ ತನ್ನ ತವರು ಮನೆಗೆ ತೆರಳಿದ್ದಾಳೆ. ಮೊದಲ ಪತ್ನಿ ಮನೆಯಿಂದ ಹೊರ ಹೋಗಿದ್ದೇ ತಡ ದಿನೇಶ್ ಎರಡನೇ ಮದುವೆಯಾಗಿದ್ದಾನೆ. ಹೀಗಾಗಿ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ವಧುವಿನ ಹುಡುಕಾಟ ನಡೆಸಿದ್ದಾನೆ.

ಮೊದಲ ಮದುವೆ ಮಾಹಿತಿ ನೀಡದೆಯೇ 2019ರ ಏಪ್ರಿಲ್ ನಲ್ಲಿ ವಿಚ್ಛೇದಿತ ಯುವತಿ ಅನುಪ್ರಿಯಾ ಎಂಬಾಕೆಯನ್ನು ದಿನೇಶ್ ಮದುವೆಯಾಗಿದ್ದಾನೆ. ಆದರೆ ಮದುವೆಯಾದ ಕೆಲ ಸಮಯದಲ್ಲೇ ಅನುಪ್ರಿಯಾಳಿಗೂ ಕಿರುಕುಳ ನೀಡಲಾರಂಭಿಸಿದ್ದಾನೆ. ದಿನೇಶ್ ಕಾಟ ತಡೆಯಲಾಗದ ಅನುಪ್ರಿಯಾ ಕೂಡಾ ತನ್ನ ತವರು ಮನೆಗೆ ತೆರಳಿದ್ದಾಳೆ. ಆದರೆ ಸುಮ್ಮನಾಗದ ದಿನೇಶ್ ಮೂರನೇ ಮದುವೆಗೆ ಸಿದ್ಧತೆ ನಡೆಸಿದ್ದಾನೆ.

ವಧುವಿಗಾಗಿ ದಿನೇಶ್ ಮತ್ತೆ ಮ್ಯಾಟ್ರಿಮೋನಿಯಲ್ ಸೈಟ್ ಮೊರೆ ಹೋಗಿದ್ದಾನೆ. ಆದರೆ ಅಷ್ಟರಲ್ಲಿ ಪ್ರಿಯದರ್ಶಿನಿ ಹಾಗೂ ಅನುಪ್ರಿಯಾಗೆ ದಿನೇಶ್ ಮೂರನೇ ಮದುವೆಯಾಗಲು ಸಿದ್ಧತೆ ನಡೆಸುತ್ತಿರುವ ವಿಚಾರ ತಿಳಿದಿದೆ. ಇಬ್ಬರೂ ನೇರವಾಗಿ ಆತ ಕೆಲಸ ಮಾಡುತ್ತಿದ್ದ ಕಂಪೆನಿಗೆ ತೆರಳಿ ಆತನನ್ನು ಹೊರ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಕಂಪನಿ ನಿರಾಕರಿಸಿದೆ.

ಆದರೆ ಸುಮ್ಮನಾಗದ ಪತ್ನಿಯರು ಸಾರ್ವಜನಿಕರ ಗಮನ ಸೆಳೆಯಲು ಆಫೀಸ್ ಗೇಟ್ ಮುಂದೆಯೇ ಕುಳಿತುಕೊಂಡಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅತ್ತ ಇಬ್ಬರು ಮಹಿಳೆಯರ ಕುಟುಂಬಸ್ಥರೂ ಆಗಮಿಸಿದ್ದಾರೆ. ಹೈಡ್ರಾಮಾ ನಡೆಯುವ ಸೂಚನೆ ಸಿಗುತ್ತಿದ್ದಂತೆಯೇ ದಿನೇಶ್ ಹಾಗೂ ಆತನ ಇಬ್ಬರು ಪತ್ನಿಯರನ್ನು ಠಾಣೆಗೆ ಬರುವಂತೆ ಪೊಲೀಸರು ಒತ್ತಾಯಿಸಿದ್ದಾರೆ.