ಪಾಕಿಸ್ತಾನದ ಅಟಾಟೋಪಗಳ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2018ರ ಆರಂಭದ ದಿನವೇ ಈ ಭಯೋತ್ಪಾದಕ ರಾಷ್ಟ್ರದ ವಿರುದ್ಧ ಸಿಡಿದೆದ್ದಿದ್ದಾರೆ.
ವಾಷಿಂಗ್ಟನ್: ಪಾಕಿಸ್ತಾನದ ಅಟಾಟೋಪಗಳ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2018ರ ಆರಂಭದ ದಿನವೇ ಈ ಭಯೋತ್ಪಾದಕ ರಾಷ್ಟ್ರದ ವಿರುದ್ಧ ಸಿಡಿದೆದ್ದಿದ್ದಾರೆ. ಅಮೆರಿಕದ 15 ವರ್ಷಗಳ ನೆರವನ್ನು ದುರುಪಯೋಗಪಡಿಸಿಕೊಂಡಿರುವ ಪಾಕಿಸ್ತಾನ ಇದರ ಬದಲಾಗಿ ನಮಗೆ ಕೇವಲ ಸುಳ್ಳು- ಮೋಸಗಳನ್ನು ನೀಡಿದೆ. ಉಗ್ರರಿಗೆ ಸುರಕ್ಷಿತ ತಾಣಗಳನ್ನು ಒದಗಿಸಿದೆ ಎಂದು ಕಿಡಿಕಾರಿ ದ್ದಾರೆ.
ಅಲ್ಲದೆ, ಇನ್ನು ಮುಂದೆ ಪಾಕಿಸ್ತಾನಕ್ಕೆ ಅಮೆರಿಕ ನೆರವು ನೀಡುವುದಿಲ್ಲ ಎಂದುಘೋಷಿಸಿದ್ದಾರೆ.ಸೋಮವಾರ ಸಂಜೆ ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ‘ಅಮೆರಿಕವು ಪಾಕಿಸ್ತಾನಕ್ಕೆ ಮೂರ್ಖನಂತೆ ಕಳೆದ 15 ವರ್ಷಗಳಿಂದ 33 ಶತಕೋಟಿ ಡಾಲರ್‌ಗಿಂತ ಹೆಚ್ಚು ನೆರವು ನೀಡಿತು. ಆದರೆ ಇದಕ್ಕೆ ಪ್ರತಿಯಾಗಿ ಅವರು (ಪಾಕಿಸ್ತಾನ) ನಮಗೆ ಸುಳ್ಳು ಹಾಗೂ ಮೋಸಗಳನ್ನು ಕೊಟ್ಟರು.
ನಮ್ಮ ದೇಶದ ನಾಯಕರನ್ನು ಮೂರ್ಖರು ಎಂದು ಅವರು ಭಾವಿಸಿದರು’ ಎಂದು ಅತ್ಯಂತ ಖಡಕ್ ಶಬ್ದಗಳಲ್ಲಿ ಗುಡುಗಿದ್ದಾರೆ. ಅಲ್ಲದೆ, ‘ಆಫ್ಘಾನಿಸ್ತಾನದಲ್ಲಿ ನಾವು ಒಂದೆಡೆ ಉಗ್ರರನ್ನು ಬೇಟೆಯಾಡುತ್ತಿದ್ದರೆ ಅದೇ ಉಗ್ರರಿಗೆ ಅವರು (ಪಾಕಿಸ್ತಾನ) ತಮ್ಮ ದೇಶದಲ್ಲಿ ಸುರಕ್ಷಿತ ‘ಸ್ವರ್ಗ’ಗಳನ್ನು ನಿರ್ಮಿಸಿಕೊಟ್ಟರು. ಇನ್ನೆಂದೂ ಪಾಕ್’ಗೆ ನಾವು ನೆರವು ನೀಡಲ್ಲ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಟ್ರಂಪ್ ನೀಡಿರುವ ಇದುವರೆಗಿನ ಅತಿ ಖಡಕ್ ಎಚ್ಚರಿಕೆಯಾಗಿದೆ. ಟ್ರಂಪ್ ರ ಈ ಟ್ವೀಟ್ ಪಾಕಿಸ್ತಾನ ಮತ್ತು ಪಾಕ್ ವಿರೋಧಿ ದೇಶವಾದ ಭಾರತದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
