ಇದು ಅಂಗೀಕಾರಗೊಂಡರೆ ಹೊರಗುತ್ತಿಗೆಯನ್ನೇ ನೆಚ್ಚಿರುವ ಬೆಂಗಳೂರಿನ ಅನೇಕ ಕಾಲ್‌ಸೆಂಟರ್‌ಗಳು, ಸಾಫ್ಟ್'ವೇರ್ ಕಂಪನಿಗಳು ತೊಂದರೆಗೆ ಈಡಾಗುವ ಭೀತಿ ಎದುರಾಗಿದೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ವೇತನ ಪ್ರಮಾಣ ಕಮ್ಮಿ ಎಂಬ ಕಾರಣಕ್ಕೆ ಹಾಗೂ ಅಮೆರಿಕದಲ್ಲಿ ಪ್ರತಿಭಾ ಕೌಶಲ್ಯ ಕಡಮೆ ಇರುವ ಕಾರಣಕ್ಕೆ ಅಮರಿಕದ ಕಂಪನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡುತ್ತವೆ.
ವಾಷಿಂಗ್ಟನ್(ಮಾ.03): ಈಗಾಗಲೇ ಎಚ್1ಬಿ ವೀಸಾ, ಜನಾಂಗೀಯ ದ್ವೇಷ.. ಇತ್ಯಾದಿಗಳ ಮೂಲಕ ಅಮೆರಿಕದಲ್ಲಿನ ಭಾರತೀಯರಿಗೆ ಶಾಕ್ ನೀಡುತ್ತಿರುವ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಈಗ ಭಾರತದ, ಅದರಲ್ಲೂ ವಿಶೇಷತಃ ಹೊರಗುತ್ತಿಗೆಯನ್ನೇ ನಂಬಿಕೊಂಡಿರುವ ಬೆಂಗಳೂರಿನ ಬಿಪಿಒ ವಲಯಕ್ಕೆ ದೊಡ್ಡ ಆಘಾತ ನೀಡುವ ಸಾಧ್ಯತೆ ಇದೆ.
ಭಾರತ ಸೇರಿದಂತೆ ಅನೇಕ ದೇಶಗಳಿಗೆ ಅಮೆರಿಕದ ಕೆಲಸಗಳು ಹೊರಗುತ್ತಿಗೆ (ಬಿಪಿಒ) ರೂಪದಲ್ಲಿ ಸ್ಥಳಾಂತರವಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಮಸೂದೆಯೊಂದನ್ನು ಅಮೆರಿಕ ಸಂಸತ್ತಿನಲ್ಲಿ ಮರುಮಂಡನೆ ಮಾಡಲಾಗಿದೆ.
ಯಾವ ಕಂಪನಿಗಳು ತಮ್ಮ ಕಾಲ್ಸೆಂಟರ್ಗಳನ್ನು ವಿದೇಶಕ್ಕೆ ಹೊರಗುತ್ತಿಗೆ ರೂಪದಲ್ಲಿ ನೀಡುತ್ತವೆಯೋ ಆ ಕಂಪನಿಗಳಿಗೆ ಸರ್ಕಾರದ ಅನುದಾನ ದೊರಕದು ಹಾಗೂ ಅವುಗಳ ಸಾಲಕ್ಕೆ ಸರ್ಕಾರದ ಖಾತರಿ ಸಿಗದು ಎಂಬುದು ವಿಧೇಯಕದ ಮಹತ್ವದ ಅಂಶಗಳಾಗಿವೆ.
ಇದು ಅಂಗೀಕಾರಗೊಂಡರೆ ಹೊರಗುತ್ತಿಗೆಯನ್ನೇ ನೆಚ್ಚಿರುವ ಬೆಂಗಳೂರಿನ ಅನೇಕ ಕಾಲ್ಸೆಂಟರ್ಗಳು, ಸಾಫ್ಟ್'ವೇರ್ ಕಂಪನಿಗಳು ತೊಂದರೆಗೆ ಈಡಾಗುವ ಭೀತಿ ಎದುರಾಗಿದೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ವೇತನ ಪ್ರಮಾಣ ಕಮ್ಮಿ ಎಂಬ ಕಾರಣಕ್ಕೆ ಹಾಗೂ ಅಮೆರಿಕದಲ್ಲಿ ಪ್ರತಿಭಾ ಕೌಶಲ್ಯ ಕಡಮೆ ಇರುವ ಕಾರಣಕ್ಕೆ ಅಮರಿಕದ ಕಂಪನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡುತ್ತವೆ.
ಉಭಯಪಕ್ಷಗಳಿಂದವಿಧೇಯಕ
‘ಅಮೆರಿಕ ಕಾಲ್ ಸೆಂಟರ್ ಮತ್ತು ಗ್ರಾಹಕ ರಕ್ಷಣಾ ಕಾಯ್ದೆ’ ಹೆಸರಿನ ವಿಧೇಯಕವನ್ನು ರಿಪಬ್ಲಿಕನ್ ಪಕ್ಷದ ಡೇವಿಡ್ ಮೆಕಿನ್ಲೇ ಹಾಗೂ ಡೆಮಾಕ್ರಟಿಕ್ ಪಕ್ಷದ ಜೀನ್ ಗ್ರೀನ್ ಅವರು ಶುಕ್ರವಾರ ಮಂಡಿಸಿದರು.
ಮಸೂದೆಯ ಅನ್ವಯ ಹೊರಗುತ್ತಿಗೆ ನೀಡುವ ಕಂಪನಿಗಳಿಗೆ ಸರ್ಕಾರದ ಅನುದಾನ ಅಥವಾ ಸಾಲಕ್ಕೆ ಸರ್ಕಾರಿ ಖಾತರಿ ಸಿಗದು. ಒಂದು ವೇಳೆ ಕೆಲಸಗಳನ್ನು ಹೊರಗುತ್ತಿಗೆ ಪಡೆದಿದ್ದರೆ, ಗುತ್ತಿಗೆ ಪಡೆದ ಕಂಪನಿಯು ಅಮೆರಿಕದ ಗ್ರಾಹಕರಿಗೆ, ತಾನು ಇರುವ ಸ್ಥಳವನ್ನು ತಿಳಿಸಬೇಕಾಗುತ್ತದೆ. ಅಲ್ಲದೆ, ಆ ಸೇವೆಯು ತನಗೆ ಅಮೆರಿಕದಲ್ಲಿರುವ ಕಾಲ್ಸೆಂಟರ್ನಿಂದಲೇ ಲಭಿಸಬೇಕು ಎಂದು ಗ್ರಾಹಕರು ‘ಹಸ್ತಾಂತರ ಕೋರಿಕೆ’ ಸಲ್ಲಿಸಿದರೆ ಅದಕ್ಕೆ ಹೊರಗುತ್ತಿಗೆ ನೀಡುವ ಕಂಪನಿ ಬದ್ಧತೆ ವ್ಯಕ್ತಪಡಿಸಬೇಕಾಗುತ್ತದೆ.
ಅಮೆರಿಕದಲ್ಲಿ ಒಟ್ಟು 25 ಲಕ್ಷ ಕಾಲ್ಸೆಂಟರ್ ಉದ್ಯೋಗಗಳು ಲಭ್ಯವಿದ್ದು, ಬಹುತೇಕ ಉದ್ಯೋಗಗಳು ಅಮೆರಿಕನ್ನರಿಗೇ ದೊರೆಯಬೇಕು ಎಂದು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಶಯವಾಗಿದೆ ಎಂದು ಮೆಕಿನ್ಲೇ ಹೇಳಿದ್ದಾರೆ.
ಆದರೆ ವಿದೇಶಗಳಲ್ಲಿ ಕಾಲ್ಸೆಂಟರ್ ಸ್ಥಾಪಿಸುವ ಅಮೆರಿಕದ ಕಂಪನಿಗಳಿಗೆ ಈ ವಿಧೇಯಕದಿಂದ ಯಾವುದೇ ಅಡ್ಡಿಯಾಗದು ಎಂದು ಮೆಕಿನ್ಲೇ ಸ್ಪಷ್ಟಪಡಿಸಿದ್ದಾರೆ. ‘ವಿಧೇಯಕದ ಉದ್ದೇಶವು ಅಮೆರಿಕ ಸರ್ಕಾರದ ಅನುದಾನ ಪಡೆದು, ಇತರ ದೇಶಗಳಲ್ಲಿ ಕಾಲ್ಸೆಂಟರ್ ಸ್ಥಾಪಿಸುವಂತಾಗಬಾರದು ಎಂಬುದಾಗಿದೆ. ಹೊರಗುತ್ತಿಗೆ ನೀಡುವುದನ್ನು ನಿಷೇಸಿ ಎಂದು ನಾವೇನೂ ಹೇಳಿಲ್ಲ. ಆದರೆ ಹೊರಗುತ್ತಿಗೆ ನೀಡುವ ಕಂಪನಿಗಳಿಗೆ ಸರ್ಕಾರದ ಯಾವುದೇ ಅನುದಾನ ದೊರೆಯದು’ ಎಂದು ಅವರು ಹೇಳಿದ್ದಾರೆ.
ಆದರೆ, ಸರ್ಕಾರವು ಹೊರಗುತ್ತಿಗೆ ನೀಡುವ ಅಮೆರಿಕ ಕಂಪನಿಗಳಿಗೆ ಸವಲತ್ತು ನಿಲ್ಲಿಸಿದರೆ ತನ್ನಿಂತಾನೇ ಅವು ಭಾರತ ಅಥವಾ ಇತರ ವಿದೇಶಗಳಿಗೆ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸುತ್ತವೆ ಎಂಬುದು ತಜ್ಞರ ವಿಶ್ಲೇಷಣೆ. ಈ ಹಿಂದೆ 2013ರಲ್ಲೇ ಒಮ್ಮೆ ಈ ವಿಧೇಯಕವನ್ನು ಮಂಡಿಸಲಾಗಿತ್ತಾದರೂ ಮಸೂದೆಗೆ ಮೋಕ್ಷ ಪ್ರಾಪ್ತಿಯಾಗಿರಲಿಲ್ಲ.
ಭಾರತದಲ್ಲಿ 28 ಲಕ್ಷಉದ್ಯೋಗಿಗಳು
ಭಾರತದಲ್ಲಿ 28 ಲಕ್ಷ ಬಿಪಿಒ ಉದ್ಯೋಗಿಗಳಿದ್ದಾರೆ. ಇವರಿಗೆ ಹೆಚ್ಚಿನ ಕೆಲಸಗಳು ಪಾಶ್ಚಾತ್ಯ ದೇಶಗಳಿಂದ, ಅದರಲ್ಲೂ ವಿಶೇಷವಾಗಿ ಅಮೆರಿಕದಿಂದ ದೊರಕುತ್ತವೆ. ಒಪಿಒ ಉದ್ಯಮದಿಂದ ಭಾರತಕ್ಕೆ 11 ಶತಕೋಟಿ ಡಾಲರ್ ಆದಾಯವಿದೆ. ಇದು ಜಿಡಿಪಿಯ ಶೇ.1ರಷ್ಟು. ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ, ಪುಣೆ, ಗುಡಗಾಂವ್, ನೋಯ್ಡಾ, ಕೋಲ್ಕತಾ, ಪುಣೆಯಂತಹ ನಗರಗಳು ಇಂದು ಬಿಪಿಒನ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇನ್ನು ಕರ್ನಾಟಕದ ದ್ವಿತೀಯ ಸ್ತರದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡಕ್ಕೂ ಬಿಪಿಒ ಉದ್ಯಮ ಇತ್ತೀಚೆಗೆ ವ್ಯಾಪಿಸಿದೆ.
(ಕನ್ನಡಪ್ರಭ ವಾ)
