ಭಾರತೀಯರು ಸೇರಿ ವಿದೇಶೀ ವೃತ್ತಿಪರರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೀಡುವ ಎಚ್‌1ಬಿ ವೀಸಾಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಮತ್ತೊಂದು ಶಾಕ್‌ ನೀಡಿದೆ.

ವಾಷಿಂಗ್ಟನ್‌(ಎ.05): ಭಾರತೀಯರು ಸೇರಿ ವಿದೇಶೀ ವೃತ್ತಿಪರರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೀಡುವ ಎಚ್‌1ಬಿ ವೀಸಾಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಮತ್ತೊಂದು ಶಾಕ್‌ ನೀಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದು ಎನ್ನಿಸಿಕೊಂಡಿರುವ ಕಂಪ್ಯೂಟರ್‌ ಪ್ರೋಗ್ರಾಮರ್‌ ಹುದ್ದೆಯನ್ನು ಅದು ತನ್ನ ನಿಗಾ ಪಟ್ಟಿಗೆ ಸೇರಿಸಿದೆ. ಅಂದರೆ ಇನ್ನು ಮುಂದೆ ಯಾವುದೇ ವಿದೇಶಿ ಕಂಪನಿಗಳು ಕಂಪ್ಯೂಟರ್‌ ಪ್ರೋಗ್ರಾಮರ್‌ ಅನ್ನು ಅಮೆರಿಕಕ್ಕೆ ಕಳುಹಿಸುವುದೇ ಆದಲ್ಲಿ, ಆ ಹುದ್ದೆ ಅದು ಹೇಗೆ ಅತ್ಯಂತ ಕೌಶಲ್ಯ ಭರಿತವಾಗಿದೆ ಎಂಬ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ. ದಾಖಲೆಗಳು ಅರ್ಜಿಗೆ ಪೂರಕವಾಗಿದ್ದಲ್ಲಿ ಮಾತ್ರವೇ ಅವರಿಗೆ ಎಚ್‌1ಬಿ ವೀಸಾ ಸಿಗುತ್ತದೆ. ಎಲ್ಲಾ ‘ಕಂಪ್ಯೂಟರ್‌ ಪ್ರೋಗ್ರಾಮರ್‌' ಹುದ್ದೆಗಳು ‘ಪರಿಣತ ವೃತ್ತಿ' ಎನ್ನಿಸಿಕೊಳ್ಳದು ಎಂಬ ಹೊಸ ಆದೇಶದಿಂದಾಗಿ ಆರಂಭಿಕ ಹಂತದ ‘ಕಂಪ್ಯೂಟರ್‌ ಪ್ರೋಗ್ರಾಮರ್‌' ವೃತ್ತಿಪರರಿಗೆ ವೀಸಾ ಅಲಭ್ಯವಾಗಲಿದೆ. ಇದು ಎಚ್‌1ಬಿ ವೀಸಾಗಾಗಿ ಕಾಯುತ್ತಿರುವ ಸಾವಿರಾರು ಭಾರತೀಯ ಕಂಪ್ಯೂಟರ್‌ ಪ್ರೋಗ್ರಾಮರ್‌ಗಳಿಗೆ ಹೊಡೆತ ಕೊಡುವ ಸಾಧ್ಯತೆ ಇದೆ.

ವೃತ್ತಿಯ ಆರಂಭಿಕ ಹಂತದಲ್ಲಿರುವ ಕಂಪ್ಯೂಟರ್‌ ಪ್ರೋಗ್ರಾಮರ್‌ಗಳಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಅಮೆರಿಕ ನಾಗರಿಕತ್ವ ಹಾಗೂ ವಲಸೆ ಸೇವಾ ವಿಭಾಗವು ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಕಂಪ್ಯೂಟರ್‌ ಪ್ರೋಗ್ರಾಮರ್‌ಗಳು ನೌಕರಿಗೆ ಅಮೆರಿಕಕ್ಕೆ ತೆರಳಬೇಕು ಎಂದರೆ ಅವರು ಅದು ‘ಪರಿಣತ ಕೆಲಸ' ಆಗಿದೆ ಅಥವಾ ‘ವೃತ್ತಿಪರ' ಅಥವಾ ‘ಸಂಕೀರ್ಣ'ವಾಗಿದೆ ಎಂದು ವಿವರಿಸಿ ಅರ್ಜಿ ಹಾಕಬೇಕು. ಸೋಮವಾರವಷ್ಟೇ ಎಚ್‌1ಬಿ ನೌಕರಿ ವೀಸಾಗಳಿಗೆ ಅರ್ಜಿ ಸಲ್ಲಿಕೆ ಅವಧಿ ಆರಂಭವಾಗಿದೆ. ಹೊಸ ವೀಸಾಗಳು 2017ರ ಅಕ್ಟೋಬರ್‌ 1ರಿಂದ ಅನ್ವಯವಾಗಲಿವೆ. ಈ ವೀಸಾಗಳ ಮೇಲೆ ಸಾವಿರಾರು ಭಾರತೀಯ ಕಂಪ್ಯೂಟರ್‌ ಪ್ರೋಗ್ರಾಮರ್‌ಗಳು ನಿರೀಕ್ಷೆ ಇಟ್ಟುಕೊಂಡಿದ್ದರು.
ನ್ಯಾಸ್ಕಾಂ ನಕಾರ: ಭಾರತದ ಸಾಫ್ಟ್‌ವೇರ್‌ ವಲಯದ ಕಂಪನಿಗಳ ಒಕ್ಕೂಟವಾದ ‘ನ್ಯಾಸ್ಕಾಂ' ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಈ ಆದೇಶದಿಂದ ಭಾರತದ ಮೇಲೇನು ಹೆಚ್ಚು ಪರಿಣಾಮವಾಗದು. ವೃತ್ತಿಯ ಆರಂಭಿಕ ಹಂತದಲ್ಲಿರುವ ವ್ಯಕ್ತಿಗಳನ್ನು ನಾವು ಎಚ್‌1ಬಿ ವೀಸಾದಡಿ ಅಮೆರಿಕಕ್ಕೆ ಕಳಿಸುವುದಿಲ್ಲ' ಎಂದಿದೆ. ಆದಾಗ್ಯೂ ಐಟಿ ಉದ್ಯಮಕ್ಕೆ ಈ ಆದೇಶ ಹಿನ್ನಡೆ ಎಂದೇ ಭಾವಿಸಲಾಗಿದೆ.

ವೀಸಾ ದುರ್ಬಳಕೆ ವಿರುದ್ಧ ಎಚ್ಚರಿಕೆ: ಎಚ್‌1ಬಿ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಅಮೆರಿಕದ ವೃತ್ತಿಪರರಿಗೆ ಭೇದಭಾವ ಮಾಡುವುದು ಸಲ್ಲದು ಎಂದು ಡೊನಾಲ್ಡ್‌ ಟ್ರಂಪ್‌ ಆಡಳಿತವು ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.
‘ಅಗತ್ಯ ಇದ್ದ ಕಡೆ ಮಾತ್ರ ವಿದೇಶೀ ವೃತ್ತಿಪರರನ್ನು ಕಂಪನಿಗಳು ನೇಮಿಸಿಕೊಳ್ಳಬೇಕು. ಆದರೆ ಎಚ್‌1ಬಿ ವೀಸಾ ದುರ್ಬಳಕೆ ಮಾಡಿಕೊಂಡು ಬರೀ ವಿದೇಶೀಯರನ್ನೇ ನೇಮಿಸಿಕೊಂಡು, ಅರ್ಹ ಸ್ಥಳೀಯ ವೃತ್ತಿಪರರನ್ನು ಕಡೆಗಣಿಸುವುದು ಸಲ್ಲದು' ಎಂದು ಸರ್ಕಾರ ಹೇಳಿದೆ.