ಬಳ್ಳಾರಿಯಲ್ಲಿ ನಡೆದ ಕೆಇಎ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಯಿತು. ಈ ವೇಳೆ, ವಿದ್ಯಾರ್ಥಿನಿಯರ ಕಾಲುಗೆಜ್ಜೆ ಹಾಗೂ ಅಭ್ಯರ್ಥಿಗಳ ಶಿವದಾರಗಳನ್ನು ತೆಗೆಸಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನೀಡಿದ್ದು, ಇದು ಕೆಲವರ ಅಸಮಾಧಾನಕ್ಕೆ ಕಾರಣವಾಯಿತು.

ಬಳ್ಳಾರಿ (ಡಿ.21): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಎಫ್‌ಡಿಎ ಹುದ್ದೆಗಳ ಭರ್ತಿಗಾಗಿ ಜಿಲ್ಲೆಯಾದ್ಯಂತ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಯಿತು.

ಕೆಇಎ ಪರೀಕ್ಷೆಯಲ್ಲಿ ಬಿಗಿ ತಪಾಸಣೆ

ಬಳ್ಳಾರಿಯ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಒಳಗೆ ಬಿಡಲಾಯಿತು. ಈ ವೇಳೆ ವಿದ್ಯಾರ್ಥಿನಿಯರ ಕಾಲುಗೆಜ್ಜೆಗಳನ್ನು ಕಳಚುವಂತೆ ಸೂಚನೆ ನೀಡಿದ್ದಲ್ಲದೇ, ಕೈ ಮತ್ತು ಕತ್ತಿನಲ್ಲಿದ್ದ ಶಿವದಾರಗಳನ್ನು ಕಟ್ ಮಾಡಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಕಳುಹಿಸಲಾಯಿತು.

ಕೇಂದ್ರಗಳಿಗೆ ಮುಂಜಾನೆಯೇ ಆಗಮಿಸಿದ ಅಭ್ಯರ್ಥಿಗಳು

ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ಆಯೋಜಿಸಲಾಗಿತ್ತು. ಮುಂಜಾನೆಯಿಂದಲೇ ಅಭ್ಯರ್ಥಿಗಳು ಉತ್ಸಾಹದಿಂದ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದರು. ಆದರೆ ತಪಾಸಣಾ ನಿಯಮಗಳಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಿದ್ಯಾರ್ಥಿನಿಯರ ಅಸಮಾಧಾನ

ಪರೀಕ್ಷಾ ಸಿಬ್ಬಂದಿಯ ಸೂಚನೆಯಂತೆ ವಿದ್ಯಾರ್ಥಿನಿಯರು ತಮ್ಮ ಕಾಲುಗೆಜ್ಜೆಗಳನ್ನು ಬಿಚ್ಚಿಟ್ಟರು. ಶಿವದಾರಗಳನ್ನು ಕತ್ತರಿಸಿದ್ದಕ್ಕೆ ಕೆಲವು ಅಭ್ಯರ್ಥಿಗಳು ಸ್ಥಳದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರಾದರೂ, ಪರೀಕ್ಷೆಯ ಸಮಯವಾಗಿದ್ದರಿಂದ ಅನಿವಾರ್ಯವಾಗಿ ನಿಯಮಗಳಿಗೆ ಅನುಸಾರವಾಗಿ ನಡೆದುಕೊಂಡರು.

ಯಶಸ್ವಿಯಾಗಿ ಮುಕ್ತಾಯಗೊಂಡ ಪರೀಕ್ಷಾ ಪ್ರಕ್ರಿಯೆ

ಪರೀಕ್ಷೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲು ಬಿಗಿ ಪೊಲೀಸ್ ಭದ್ರತೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಪರೀಕ್ಷೆಯು ಯಶಸ್ವಿಯಾಗಿ ಸಂಪನ್ನವಾಯಿತು ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.