ಚೆನ್ನೈ (ಆ. 16): ಮನುಷ್ಯ ಎಷ್ಟೇ  ದೊಡ್ಡವನಾಗಲಿ ಆತನಿಗೆ  ತನ್ನದೇ ಆದ ಧಾರ್ಮಿಕ ನಂಬಿಕೆಗಳಿರುತ್ತವೆ. ಜೀವನದಲ್ಲಿ ಮಹತ್ವದ್ದನ್ನು ಸಾಧಿಸಿದಾಕ್ಷಣ ಯಾರೂ ತಮ್ಮ ಮೂಲ ನಂಬಿಕೆಯನ್ನು ಕಳೆದುಕೊಳ್ಳಬೇಕೆಂದೇನೂ ಇಲ್ಲ. ಇತ್ತೀಚೆಗೆ ಇಸ್ರೋ ಮುಖ್ಯಸ್ಥ  ಕೆ.ಸಿವಾನ್ ಉಡುಪಿ ಹಾಗೂ ಕೊಲ್ಲೂರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದೂ ದೊಡ್ಡ ವಿವಾದವಾಗಿ, ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಖ್ಯಾತ ನಟ ಮಾಧವನ್ ತಮ್ಮ ತಂದೆ ಹಾಗೂ ಮಗನೊಂದಿಗೆ ಉಪಕರ್ಮದಂದು ಜನಿವಾರ ಬದಲಾಯಿಸಿದ್ದಕ್ಕೂ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. 

ಒಂದು ಗುಂಪು ಜನಿವಾರ ಧರಿಸಿದ್ದಕ್ಕೇ ಕಮೆಂಟ್ ಮಾಡಿದರೆ, ಮತ್ತೊಂದು ಗುಂಪು ಅವರ ಮನೆಯಲ್ಲಿ ಶಿಲುಬೆ ಇರುವುದಕ್ಕೂ ಆಕ್ಷೇಪವೆತ್ತಿದೆ. ಆದರೆ, ಎಲ್ಲರಿಗೂ ತಮ್ಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಮಾಧವನ್. ಅಷ್ಟಕ್ಕೂ ಅವರು  ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ್ದು ಹೇಗೆ?

‘ಉಪಕರ್ಮ’ ದಿನ ಮಾಧವನ್ ಅವರ ಮಗ ವೇದಾಂತ್, ಅಪ್ಪ ರಂಗನಾಥನ್ ಜೊತೆ ಜನಿವಾರ ಬದಲಾಯಿಸಿಕೊಂಡ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ನಟನೆಂದ ಮೇಲೆ ಅವರಿಗೆ ಒಂದು ವೈಯಕ್ತಿಕ ಜೀವನ ಇರುತ್ತೆ ಎಂಬುವುದೂ ಗೊತ್ತಿದ್ದರೂ, ಜನರು ಮನಸ್ಸಿಗೆ ಬಂದಂತೆ ನಾಲಿಗೆ ಉದ್ದ ಮಾಡಿದ್ದಾರೆ. ಅವರೆಗೆಲ್ಲ ಮಾಧವನ್ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟಿದ್ದಾರೆ.  

'ನಿಮ್ಮ ಮಾತಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದಷ್ಟು ಬೇಗ ನೀವೆಲ್ಲಾ ಸುಧಾರಿಸಿಕೊಳ್ಳುತ್ತೀರಿ ಅಂದುಕೊಳ್ಳುತ್ತೇನೆ. ನಮ್ಮ ಮನೆ ದೇವರಕೋಣೆಯಲ್ಲಿ ಗೋಲ್ಡನ್ ಟೆಂಪಲ್ ಫೋಟೋವೂ ಇದೆ. ನಿಮ್ಮ ರೋಗಗ್ರಸ್ಥ ಮನಸ್ಥಿತಿಗೆ ಇದು ಕಾಣಿಸದೇ ಇರುವುದು ಆಶ್ಚರ್ಯ. ನಾನು ಸಿಖ್ ಧರ್ಮಕ್ಕೆ ಮತಾಂತರಗೊಂಡೆನಾ ಎಂದು ಕೇಳಿಲ್ವಲ್ಲಾ?‘ ಎಂದು ಮೂಲಭೂತವಾದಿಗಳಿಗೆ ಹಾಗೂ ಸೋ ಕಾಲಡ್ ಉದಾರವಾದಿಗಳಿಗೂ ಉತ್ತರಿಸಿದ್ದಾರೆ.

ನನ್ನ ಆಸ್ಮಿತೆ ಬಗ್ಗೆ ಹೆಮ್ಮೆಪಡುತ್ತಾ, ಅದನ್ನು ಆಚರಿಸುತ್ತಾ ಬೇರೆಯವರ ಆಚರಣೆ, ನಂಬಿಕೆಗಳಿಗೆ ಗೌರವಿಸುವಂತೆ ಚಿಕ್ಕಂದಿನಿಂದಲೇ ಮನೆಯಲ್ಲಿ ಹೇಳಿಕೊಟ್ಟಿದ್ದಾರೆ. ನನ್ನ ಮಗನೂ ಅದನ್ನೇ ಪಾಲಿಸುತ್ತಾನೆ. ನಾನು ದರ್ಗಾಗೂ ಹೋಗುತ್ತೇನೆ, ಚರ್ಚ್‌ಗೂ ಹೋಗುತ್ತೇನೆ. ಆಗೆಲ್ಲಾ ನಾನು ಹಿಂದೂ ಎಂದು ತಿಳಿದಾಗ ಹೆಮ್ಮೆ ಪಡುತ್ತಾರೆ,' ಎಂದು ಹೇಳಿದ್ದಾರೆ. 

ನಂಬಿಕೆ, ಆಚರಣೆ, ಸಂಪ್ರದಾಯ ಇವೆಲ್ಲಾ ಅವರವರ ವೈಯಕ್ತಿಯ ಅಭಿಪ್ರಾಯ. ನಮ್ಮ ನಮ್ಮ ಆಸ್ಮಿತೆಗಳನ್ನು ಉಳಿಸಿಕೊಂಡು ಅದೇ ರೀತಿ ಬೇರೆಯವರ ನಂಬಿಕೆ, ಆಚರಣೆಗಳನ್ನು ಗೌರವಿಸುತ್ತಾ ಹೋಗುವುದೇ ನಿಜವಾದ ಧರ್ಮ ಎಂಬುದು ಸಾರ್ವತ್ರಿಕವಾಗಿ ಒಪ್ಪುವಂತದ್ದು.