ಬೆಂಗಳೂರು(ಜು.13): ಅಧ್ಯಾತ್ಮ ಮತ್ತು ವಿಜ್ಞಾನ ಒಂದಕ್ಕೊಂದು ಪೂರಕವೋ ಅಥವಾ ವಿರುದ್ಧವೋ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಭೌತಿಕ ಜಗತ್ತಿನ ಪ್ರತಿಯೊಂದೂ ಆಗು-ಹೋಗುಗಳಿಗೆ ಲೌಕಿಕ ಜಗತ್ತು ಕಾರಣೀಭೂತ(ದೂಷಿಸುವುದೂ ಸೇರಿದಂತೆ)ಎಂಬ ಅಧ್ಯಾತ್ಮದ ವಾದಕ್ಕೆ ಪ್ರತಿಯಾಗಿ, ಭೌತಿಕ ಜಗತ್ತಿನ ಇರುವಿಕೆಗೆ ಭೌತಿಕ ಕಾರಣಗಳನ್ನೇ ಕಂಡು ಹಿಡಿಯಲು ವಿಜ್ಞಾನ ಪ್ರಯತ್ನಿಸುತ್ತಲೇ ಇರುತ್ತದೆ.

ಮಾನವನ ನಾಗರಿಕತೆಯ ಇತಿಹಾಸದಲ್ಲಿ ಅಧ್ಯಾತ್ಮ (ಧರ್ಮ) ಮತ್ತು ವಿಜ್ಞಾನದ ನಡುವೆ ಕೆಲವೊಮ್ಮೆ ಸಂಘರ್ಷವೂ, ಮಗದೊಮ್ಮೆ ಒಪ್ಪಂದವೂ, ಇನ್ನೊಮ್ಮೆ ಜ್ಞಾನದ ವಿನಿಮಯವೂ ಆಗಿದೆ.

ಕಾಲಘಟ್ಟ ಯಾವುದೇ ಇರಲಿ, ಯಾವುದೇ ಪ್ರದೇಶದ, ಪ್ರಾಂತ್ಯದ, ಸಭ್ಯತೆಯ ಸಮಯವಿರಲಿ, ಧರ್ಮ ಮತ್ತು ವಿಜ್ಞಾನ ಪರಸ್ಪರ ಎದುರಾಗುತ್ತಲೇ ಬಂದಿವೆ. ಪುರಾತನ ಭಾರತೀಯ ಸಮಜದಲ್ಲೂ ಧರ್ಮ ಮತ್ತು ವಿಜ್ಞಾನದ ನಡುವೆ ಸಂಘರ್ಷ ನಡೆದಿರುವುದು ಇತಿಹಾಸದಿಂದ ತಿಳಿದು ಬರುತ್ತದೆ.

ವೈದಿಕ ಏಕಸ್ವಾಮ್ಯವನ್ನು ಧಿಕ್ಕರಿಸಿ, ಲೌಕಿಕ ಜಗತ್ತಿನ ಇರುವಿಕೆಯನ್ನು ಪ್ರಶ್ನಿಸಿ, ಭಾರತೀಯ ಸಮಾಜದಲ್ಲಿ ಹಲವರು ಬಂಡೆದಿದ್ದಾರೆ. ಆದರೆ ಚಾರ್ವಾಕ ಸಸ್ಕೃತಿಯನ್ನೂ ಒಪ್ಪಿದ, ಅದರ ಸಿದ್ಧಾಂತಕ್ಕೂ ಕಿವಿಗೊಟ್ಟ ಸಭ್ಯ ಸಮಾಜ ನಮ್ಮದು ಎಂದರೆ ತಪ್ಪಾಗಲಾರದು.

ಅದರಂತೆ ಯೂರೋಪ್ ಸಮಾಜದಲ್ಲೂ ಧರ್ಮ ಮತ್ತು ವಿಜ್ಞಾನದ ನಡುವೆ ಸಂಘರ್ಷ ನಡೆದಿರುವುದು ಕಂಡುಬರುತ್ತದೆ. ಚರ್ಚ್ ಏಕಸ್ವಾಮ್ಯವನ್ನು ಪ್ರಶ್ನಿಸಿ ನಡೆದ ಚಳವಳಿಗಳಲ್ಲಿ ವಿಜ್ಞಾನ ಕೂಡ ಮಹತ್ವದ ಪಾತ್ರ ನಿರ್ವಹಿಸಿದೆ.

ಅಷ್ಟಕ್ಕೂ ಧರ್ಮ-ಅಧ್ಯಾತ್ಮ ನಡುವಿನ ಶ್ರೇಷ್ಠತೆಯ ಕುರಿತಾದ ಈ ಪುರಾತನ ಚರ್ಚೆ ಈಗೇಕೆ ಅಂತೀರಾ?. ಇಷ್ಟೆಲ್ಲಾ ಪೀಠಿಕೆಗೆ ಕಾರಣರಾದವರು ಇಸ್ರೋ ಅಧ್ಯಕ್ಷ ಕೆ. ಸಿವಾನ್.

ಹೌದು ಇದೇ ಜು.15ರಂದು ಇಸ್ರೋ ತನ್ನ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಗೆ ಚಾಲನೆ ನೀಡಲಿದೆ. ಚಂದ್ರಯಾನ-2 ಹೊತ್ತ GSLV MKIII ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕಕೆ ಚಿಮ್ಮಲಿದೆ.

ಇದಕ್ಕೂ ಮೊದಲು ಯೋಜನೆಯ ಯಶಸ್ವಿಗಾಗಿ ಇಸ್ರೋ ಮುಖ್ಯಸ್ಥ ಕೆ.ಸಿವಾನ್ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಯಾವುದೇ ಮಹತ್ವದ ಯೋಜನೆಗೆ ಚಾಲನೆ ನೀಡುವ ಮೊದಲು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಕೆ. ಸಿವಾನ್, ಈ ಬಾರಿ ಉಡುಪಿಯ ಕೃಷ್ಣ ಮಠ ಮತ್ತು ಪಲಿಮಾರು ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಪಲಿಮಾರು ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ ಕೆ. ಸಿವಾನ್ ವಿದ್ಯಾದೀಶ್ ತೀರ್ಥರಿಂದ ಆಶೀರ್ವಾದ ಪಡೆದಿದ್ದಾರೆ. ಚಂದ್ರಯಾನ್-2 ಯೋಜನೆಯ ಯಶಸ್ವಿಯಾಗಿ ದೇವರಲ್ಲಿ ಪ್ರಾರ್ಥಿಸಲು ಮತ್ತು ಶ್ರೀಗಳ ಆಶೀರ್ವಾದ ಪಡೆಯಲು ಉಡುಪಿಗೆ ಬಂದಿದ್ದಾಗಿ ಕೆ. ಸಿವಾನ್ ತಿಳಿಸಿದ್ದಾರೆ.

ಇದು ಮತ್ತೊಂದು ಚರ್ಚೆಗೆ ಗ್ರಾಸವಾಗಿದ್ದು, ವಿಜ್ಞಾನಿಯೊಬ್ಬ ತನ್ನ ಸಾಧನೆಗೆ ದೇವರ ಮೊರೆ ಹೋಗುವುದು ಸೂಕ್ತವೇ ಎಂಬ ಚರ್ಚೆಗೆ ಇಂಬು ನೀಡಿದೆ. ಲೌಕಿಕ ಜಗತ್ತು ನೀಡಲಾಗದ ಉತ್ತರಗಳನ್ನು ಭೌತಿಕವಾಗಿ ಕಂಡು ಹಿಡಿಯಲು ಪ್ರಯತ್ನಿಸುವ ವಿಜ್ಞಾನಿ, ತನ್ನದೇ ಸಂಶೋಧನಗಳ ಯಶಸ್ವಿಗಾಗಿ ಅದೇ ದೇವರ ಮೊರೆ ಹೋಗುವುದು ಎಷ್ಟು ಸೂಕ್ತ ಎಂಬುದು ಕೆಲವರ ಪ್ರಶ್ನೆ.

ವಿಜ್ಞಾನಿ ಕೂಡ ಇದೇ ಸಮಾಜದ ಪ್ರತಿಬಿಂಬ. ತನ್ನ ಸುತ್ತಲಿನ ಪರಿಸರದ ಪ್ರಭಾವ ಆತನ ಮೇಲೂ ಆಗಿರಲಿಕ್ಕೂ ಸಾಕು. ಆಸ್ತಿಕತೆ ಭಾರತೀಯ ಸಮಾಜದ ಆತ್ಮವಾದರೆ ಅದರಿಂದ ವಿಜ್ಞಾನಿಯನ್ನು ಹೊರಗಿಡಲು ಹೇಗೆ ಸಾಧ್ಯ. ಅಷ್ಟಕ್ಕೂ ಓರ್ವ ವಿಜ್ಞಾನಿ ತನ್ನ ಅಂತರಾತ್ಮದ ಅಧ್ಯಾತ್ಮದ ಕೂಗಿಗೆ ಓಗೋಟ್ಟು ದೇವರ ಸನ್ನಿಧಿಗೆ ಬರುವನೇ ಹೊರತು ತನ್ನ ಸಂಶೋಧನೆಗಳ, ಸಾಧನೆಗಳ ಮೇಲಿನ ಸಂಶಯದಿಂದಾಗಿ ಅಲ್ಲ. ಭಾರತೀಯ ಸಮಾಜದ ಪರಿಸ್ಥಿತಿಗಂತೂ ಈ ಮಾತು ನಿಜ.

ನಾಸಾದಲ್ಲೂ ಧಾರ್ಮಿಕ ಆಚರಣೆ:

ಇನ್ನು ಕೇವಲ ಇಸ್ರೋ ಸಂಸ್ಥೆ ಮಾತ್ರ ಧಾರ್ಮಿಕ ಆಚರಣೆಗಳ ಮೊರೆ ಹೋಗುತ್ತದೆ ಎಂದು ಭಾವಿಸಬೇಕಿಲ್ಲ. ವಿಶ್ವದ ಅತ್ಯಂತ ಪ್ರಬಲ ಬಾಹಾಕ್ಯಾಶ ಸಂಸ್ಥೆ ನಾಸಾ ಕೂಡ ಯಾವುದೇ ಮಹತ್ವದ ಯೋಜನೆಗಳ ಅನುಷ್ಠಾನಕ್ಕೂ ಮೊದಲು ಧಾರ್ಮಿಕ ಆಚರಣೆಗಳ ಮೊರೆ ಹೋಗುತ್ತದೆ.

1964ರಿಂದ ಗುಡ್ ಲಕ್ ಪೀನಟ್ಸ್ ಎಂಬ ವಿಶಿಷ್ಠ ಆಚರಣೆಯನ್ನು ನಾಸಾ ಪಾಲಿಸಿಕೊಂಡು ಬರುತ್ತಿದೆ. ಬಾಹ್ಯಾಕಾಶ ಯೋಜನೆಗಳಲ್ಲಿ ಭಾಗಿಯಾಗುವ ಸಿಬ್ಬಂದಿ ಪರಸ್ಪರ ಕಡಲೆಕಾಯಿಯನ್ನು ಹಸ್ತಾಂತರಿಸುವ ಈ ವಿಶಿಷ್ಟ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ.

ಅದೆನೆ ಇರಲಿ, ಧರ್ಮ ಮತ್ತು ವಿಜ್ಞಾನದ ನಡುವಿನ ಸಂಘರ್ಷಕ್ಕಿಂತ ಈ ಎರಡೂ ಕ್ಷೇತ್ರಗಳು ಪೂರಕವಾಗಿ ಕೆಲಸ ಮಾಡಿದರೆ ಬ್ರಹ್ಮಾಂಡದ ಅಸ್ತಿತ್ವದ ಕುರಿತಾದ ಮಾನವನ ಮೂಲ ಪ್ರಶ್ನೆಗಳಿಗೆ ಉತ್ತರ ಖಂಡಿತ ದೊರೆಯುತ್ತದೆ. ದೊರೆಯಲಿ ಎಂಬುದು ಈ ಪೃಥ್ವಿಯ ಮೇಲೆ ವಾಸಿಸುತ್ತಿರುವ ಪ್ರತಿಯೊಬ್ಬ ಆಸ್ತಿಕ ಮತ್ತು ನಾಸ್ತಿಕನ ನಿರೀಕ್ಷೆ ಕೂಡ ಹೌದು.