ಬೆಂಗಳೂರು[ಮಾ.05]: ನಾಗರಿಕರ ಸೈಕಲ್‌ ಬಳಕೆ ಹೆಚ್ಚಳ ಮತ್ತು ನಗರದಲ್ಲಿ ಮಾಲಿನ್ಯ ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಾರ್ವಜನಿಕ ಸೈಕಲ್‌ ಹಂಚಿಕೆ (ಪಿಬಿಎಸ್‌) ಯೋಜನೆ ‘ಟ್ರಿಣ್‌ ಟ್ರಿಣ್‌’ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸೌಧ ಮುಂಭಾಗ ಸೋಮವಾರ ಚಾಲನೆ ನೀಡಿದರು.

ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದಕ್ಕಾಗಿ ಮತ್ತು ಮಾಲಿನ್ಯಮುಕ್ತ ಕಡಿತಗೊಳಿಸಲು ಬೈಕಲ್‌ ಯೋಜನೆ ಉಪಯುಕ್ತವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಯೋಜನೆ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿಯೂ ನಾಗರಿಕರು ಸೈಕಲ್‌ ಬಳಸಬಹುದು. ಎಲ್ಲ ಮೆಟ್ರೋ ನಿಲ್ದಾಣಗಳು ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಸೈಕಲ್‌ ದೊರೆಯಲಿದ್ದು, ನಾಗರಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಎಂದು ಹೇಳಿದರು.

ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಮಾತನಾಡಿ, ಖಾಸಗಿ ಸಹಯೋಗದಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ನಗರಾಭಿವೃದ್ಧಿ ಇಲಾಖೆ ವತಿಯಿಂದ ಸಾರ್ವಜನಿಕ ಸೈಕಲ್‌ ಹಂಚಿಕೆ (ಪಿಬಿಎಸ್‌) ಯೋಜನೆ ಜಾರಿಗೊಳಿಸಲಾಗುತ್ತಿದೆ. ಎರಡನೇ ಹಂತದಲ್ಲಿ ನಾಗರಿಕರ ಸ್ಪಂದನೆಗೆ ಅನುಗುಣವಾಗಿ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ನಗರ ಭೂಸಾರಿಗೆ ನಿರ್ದೇಶನಾಲಯ ನಿರ್ದೇಶಕ ವಿ. ಪೊನ್ನುರಾಜ್‌ ಉಪಸ್ಥಿತರಿದ್ದರು.

ಪೆಡಲ್‌, ಬ್ಯಾಟರಿ ಚಾಲಿತ ಸೈಕಲ್‌, 400 ಸ್ಥಳಗಳಲ್ಲಿ 6 ಸಾವಿರ ಸೈಕಲ್‌ಗಳು ಲಭ್ಯ

ಪೆಡಲ್‌ ಮತ್ತು ಬ್ಯಾಟರಿ ಚಾಲಿತ ಎರಡು ಮಾದರಿ ಸೈಕಲ್‌ಗಳಿವೆ. ಪೆಡಲ್‌ ಸೈಕಲ್‌ ಅರ್ಧ ಗಂಟೆಗೆ .5 ದರ ವಿಧಿಸಲಾಗುತ್ತದೆ. ಬ್ಯಾಟರಿ ಚಾಲಿತ ಸೈಕಲ್‌ಗೆ ಮೊದಲ ಒಂದು ಕಿ.ಮೀ. .5 ಹಾಗೂ ನಂತರದ ಪ್ರತಿ ನಿಮಿಷಕ್ಕೆ 60 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು ಪ್ಲೇಸ್ಟೋರ್‌ನಲ್ಲಿ ಬೌನ್ಸ್‌, ಯುಲು ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ತಮಗೆ ಅನುಕೂಲವಾಗುವ ಸ್ಥಳಗಳಲ್ಲಿ ಸೈಕಲ್‌ ಬಳಸಬಹುದು.

ಪ್ರಾರಂಭಿಕ ಹಂತದಲ್ಲಿ ನಗರದ ವಿವಿಧ 400 ಕಡೆ ಆರು ಸಾವಿರ ಸೈಕಲ್‌ಗಳನ್ನು ನಾಗರಿಕರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ನಗರದ ಎಲ್ಲ ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣಗಳು ಮಾತ್ರವಲ್ಲ. ಜನದಟ್ಟಣೆ ಇರುವ ಎಂ.ಜಿ. ರಸ್ತೆ, ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ, ಇಂದಿರಾನಗರ, ಮಲ್ಲೇಶ್ವರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸೈಕಲ್‌ಗಳು ಬಾಡಿಗೆಗೆ ಲಭ್ಯವಾಗಲಿವೆ. ಸಾರ್ವಜನಿಕ ಒಂದು ನಿಲ್ದಾಣದಲ್ಲಿ ಸೈಕಲ್‌ ಪಡೆದು ತಾವು ತಲುಪಬೇಕಿರುವ ಜಾಗದ ಸಮೀಪದ ನಿಲ್ದಾಣದಲ್ಲಿ ಸೈಕಲ್‌ ಬಿಟ್ಟು ತೆರಳಬಹುದು.