ತಿರುವನಂತಪುರಂ: ಲಕ್ಷಾಂತರ ಭಕ್ತರು ಭೇಟಿ ನೀಡುವ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತರಿಗೆ ‘ಅಪ್ಪಂ’ ಮತ್ತು ‘ಅರವಣ’ ಪ್ರಸಾದ ಮಾರಾಟ ಮಾಡಲಾಗುತ್ತದೆ. ಆದರೆ, ಮುಂದಿನ ವರ್ಷದಿಂದ ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ನೀಡುವ ಪ್ರಸಾದ ಸಿಎಫ್‌ಟಿಆರ್‌ಐ ಸಲಹೆಯೊಂದಿಗೆ ಸಿದ್ಧಗೊಳ್ಳಲಿದೆ.
 ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಮತ್ತು ಪಳನಿಯ ಮುರುಗಾ ದೇವಸ್ಥಾನದಲ್ಲಿ ಪಂಚಾಮೃತಂ ಸಿದ್ಧ ಮಾಡುವುದಕ್ಕೆ ಸಲಹೆ ನೀಡುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಈಗ ಶಬರಿಮಲೆ ಪ್ರಸಾದಗಳಿಗೆ ಹೊಸ ರುಚಿ ನೀಡಲು ಸಿದ್ಧವಾಗುತ್ತಿದೆ. 
ಸಿಎಫ್‌ಟಿಆರ್‌ಐನ ಮೈಸೂರು ಕ್ಯಾಂಪಸ್‌ನ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ, ಉತ್ಪಾದನಾ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರೆ. ಸರ್ಕಾರಿ ಸಂಸ್ಥೆಯಾದ ಸಿಎಫ್‌ಟಿಆರ್‌ಐ ನಿಯಮ ಮತ್ತು ಷರತ್ತುಗಳನ್ನು ಅಂತಿಮಗೊಳಿಸಲು ನಿರ್ಧರಿಸಿದೆ. ಮೇ 16ರಂದು ಜ್ಞಾಪನಾಪತ್ರಕ್ಕೆ ಸಹಿ ಮಾಡುವ ಸಾಧ್ಯತೆಯಿದೆ.