ರಾಮಲಿಂಗಾರೆಡ್ಡಿ  ಹಾಲಿ ಸಾರಿಗೆ ಸಚಿವರು. ಸಾರಿಗೆ ಸಚಿವರಾಗುವ ಹಾದಿಯಲ್ಲಿ ಆರು ಬಾರಿ ಶಾಸಕರಾಗಿ, ನಾಲ್ಕನೇ ಬಾರಿ ಸಚಿವರಾಗಿ, ಬರುವ ಹಾದಿಯ ಹಿಂದೆ ಬಡವರ ಪರ ಕಾಳಜಿ ಇದೆ. ಶೋಷಿತರು, ದುರ್ಬಲರ ಪರ ಕಾಳಜಿಯಿಂದಲೇ ಇಂದಿರಾಗಾಂಧಿ, ದೇವರಾಜ್ ಅರಸ್​ ಅವರ ಕ್ರಾಂತಿಕಾರಿ ಕಾರ್ಯಕ್ರಮಗಳಿಗೆ ಮಾರುಹೋಗಿ ಕಾಂಗ್ರೆಸ್ ಪಕ್ಷ ಸೇರಿದರು.

ಬೆಂಗಳೂರು (ಜು.01): ರಾಮಲಿಂಗಾರೆಡ್ಡಿ ಹಾಲಿ ಸಾರಿಗೆ ಸಚಿವರು. ಸಾರಿಗೆ ಸಚಿವರಾಗುವ ಹಾದಿಯಲ್ಲಿ ಆರು ಬಾರಿ ಶಾಸಕರಾಗಿ, ನಾಲ್ಕನೇ ಬಾರಿ ಸಚಿವರಾಗಿ, ಬರುವ ಹಾದಿಯ ಹಿಂದೆ ಬಡವರ ಪರ ಕಾಳಜಿ ಇದೆ. ಶೋಷಿತರು, ದುರ್ಬಲರ ಪರ ಕಾಳಜಿಯಿಂದಲೇ ಇಂದಿರಾಗಾಂಧಿ, ದೇವರಾಜ್ ಅರಸ್​ ಅವರ ಕ್ರಾಂತಿಕಾರಿ ಕಾರ್ಯಕ್ರಮಗಳಿಗೆ ಮಾರುಹೋಗಿ ಕಾಂಗ್ರೆಸ್ ಪಕ್ಷ ಸೇರಿದರು.

ಕಾಲೇಜು ದಿನಗಳಿಂದಲೇ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ರಾಮಲಿಂಗಾರೆಡ್ಡಿ, 1973-74ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಫೈನ್​ ಆರ್ಟ್​ ವಿಭಾಗದ ಕಾರ್ಯದರ್ಶಿಯಾಗುವ ಮೂಲಕ ಜವಾಬ್ದಾರಿ ನಿರ್ವಹಣೆ ಆರಂಭಿಸಿದ್ರು. ಅದೇ ವರ್ಷವೇ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್​ನ ಸದಸ್ಯರಾಗಿ ಆಯ್ಕೆಯಾದ ರಾಮಲಿಂಗಾರೆಡ್ಡಿಯವರು, 1977-78ರ ವೇಳೆಗೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದರು. ಹೀಗೆ ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚತುರತೆ ಹೊಂದಿದ್ದ ರಾಮಲಿಂಗಾರೆಡ್ಡಿಯವರು 1983-84ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಚುನಾವಣಾ ರಾಜಕಾರಣದಲ್ಲಿ ದೊಡ್ಡ ಗೆಲುವು ಕಂಡರು. 1985ರಿಂದ1990ರ ವರೆಗೆ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ರಾಮಲಿಂಗಾರೆಡ್ಡಿಯವರು 1989ರಲ್ಲಿ ಮೊಟ್ಟ ಮೊದಲ ಬಾರಿಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.

ಮೊಟ್ಟಮೊದಲ ಬಾರಿ ಶಾಸಕರಾದಗಲೇ 1992ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಹಣಕಾಸು, ಬೃಹತ್ ಹಾಗೂ ಮದ್ಯಮ ಕೈಗಾರಿಕೆ ಹಾಗೂ ಎಪಿಎಂಸಿ ಇಲಾಖೆಗಳ ರಾಜ್ಯ ಖಾತೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ರು. 1994ರಲ್ಲಿ ಎರಡನೇ ಬಾರಿ ಜಯನಗರ ವಿಧಾನಸಭಾ ಕ್ಷೇತ್ರದಿಂದಲೇ ಗೆದ್ದರೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಾರದ ಕಾರಣ ವಿಪಕ್ಷದಲ್ಲಿ ಕುಳಿತರು. 1999ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ರಾಮಲಿಂಗಾರೆಡ್ಡಿ ಅವರು 2002ರಲ್ಲಿ ಅಂದಿನ ಸಿಎಂ ಎಸ್​.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ ರಾಮಲಿಂಗಾರೆಡ್ಡಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮೂಲಕ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪಡಿತರ ವಿತರಣೆಯಲ್ಲಿ ಕ್ರಾಂತಿ ಮಾಡಿದರು.

2004ರಲ್ಲಿ ಸತತ ನಾಲ್ಕನೇ ಬಾರಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಕಂಡ ರಾಮಲಿಂಗಾರೆಡ್ಡಿ, ಅಂದಿನ ಸಿಎಂ ಧರ್ಮಸಿಂಗ್ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡ್ರು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಬಿಟಿಎಂ ಲೇಔಟ್​ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಾರದ ಕಾರಣ ವಿಪಕ್ಷದಲ್ಲಿ ಕುಳಿತು ಜವಾಬ್ದಾರಿ ನಿರ್ವಹಿಸಿದರು. 2013ರಲ್ಲಿ ಸತತ ಆರನೇ ಬಾರಿ ಗೆಲುವು ಕಂಡ ರಾಮಲಿಂಗಾರೆಡ್ಡಿಯವರು ಯಶಸ್ವಿಯಾಗಿ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಚಿವರಾಗಿ ಮಾಡಿದ ಕೆಲಸ, ಆಗಬೇಕಾರುವ ಕಾರ್ಯಗಳು ಎಲ್ಲದರ ಬಗ್ಗೆ ಉತ್ತರಿಸಲು ಈಗ ಹಲೋ ಮಿನಿಸ್ಟರ್ ಮೂಲಕ ನಿಮ್ಮ ಮುಂದಿದ್ದಾರೆ ರಾಮಲಿಂಗಾರೆಡ್ಡಿ.