ಸರ್ಕಾರದಿಂದ ಸಿದ್ದರಾಮಯ್ಯ ಆಪ್ತರಿಗೂ ಕೊಕ್‌

Transfer of officers close to siddaramaiah
Highlights

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತರು ಎನಿಸಿಕೊಂಡ ಅನೇಕರಿಗೆ ಮೈತ್ರಿಕೂಟ ಸರ್ಕಾರದಲ್ಲಿ ಕೋಕ್ ನೀಡಲಾಗಿದೆ. 

ಬೆಂಗಳೂರು :  ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಿದ್ದರಾಮಯ್ಯ ಅವರ ಆಪ್ತ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಎದ್ದು ಕಾಣುವಂತಿದೆ. ವಿಶೇಷವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಬಿ.ಎಸ್‌. ಶೇಖರಪ್ಪ ಅವರನ್ನು ಇತ್ತೀಚೆಗೆ ಕಾಡಾಗೆ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. 

ಸಿದ್ದರಾಮಯ್ಯ ಅವರ ಅತ್ಯಾಪ್ತ ಅಧಿಕಾರಿಯೆನಿಸಿದ್ದ ಹಾಗೂ ಸಿಎಂ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್‌.ಕೆ. ಅತೀಕ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಅವರಿಗೆ ಯಾವುದೇ ಸ್ಥಾನ ಇದುವರೆಗೂ ತೋರಿಸಿಲ್ಲ. ಅದೇ ರೀತಿ ಕುರುಬ ಸಮುದಾಯಕ್ಕೆ ದಯಾನಂದ್‌ ಅವರನ್ನು ವರ್ಗಾವಣೆ ಮಾಡಿ, ಸ್ಥಾನ ತೋರಿಸಿಲ್ಲ. ಹೀಗೆ ಸಿದ್ದರಾಮಯ್ಯ ಅವರಿಗೆ ಆಪ್ತರಾದ ಹಲವು ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಇದು ಕೂಡ ಸಿದ್ದರಾಮಯ್ಯ ಅವರು ಮೈತ್ರಿ ಕೂಟ ಸರ್ಕಾರದ ವಿರುದ್ಧ ಕೆಂಗಣ್ಣು ಬೀರಲು ಕಾರಣವೆನ್ನಲಾಗುತ್ತಿದೆ.

ರತ್ನಪ್ರಭಾ ಅವಧಿ ವಿಸ್ತರಣೆಗೆ ಕೊಕ್‌ಗೆ ಸಿದ್ದು ಆಪ್ತತೆ ಕಾರಣ?

ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಅಧಿಕಾರಾವಧಿಯನ್ನು ಮುಂದುವರೆಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದಿದ್ದಕ್ಕೆ, ಮುಖ್ಯ ಕಾರ್ಯದರ್ಶಿಯವರು ಸಿದ್ದರಾಮಯ್ಯ ಅವರೊಂದಿಗೆ ಹೊಂದಿದ್ದ ಆಪ್ತತೆಯೇ ಕಾರಣ ಎನ್ನಲಾಗುತ್ತಿದೆ.

ಜೂ. 30ಕ್ಕೆ ನಿವೃತ್ತರಾಗಲಿರುವ ರತ್ನಪ್ರಭಾ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆಸಲು ಕಾಂಗ್ರೆಸ್‌ನಿಂದ ಒತ್ತಡವಿತ್ತು. ಹೀಗಾಗಿ ರಾಜ್ಯ ಸರ್ಕಾರವು ಅವರ ಅವಧಿಯನ್ನು ಮುಂದುವರೆಸಲು ಕೇಂದ್ರಕ್ಕೂ ಶಿಫಾರಸು ಮಾಡಿತ್ತು. ಕೇಂದ್ರ ಒಪ್ಪಿಗೆ ನೀಡುವುದು ಬಾಕಿಯಿತ್ತು. ಆದರೆ, ರತ್ನಪ್ರಭಾ ಅವರು ಸಿದ್ದರಾಮಯ್ಯ ಅವರಿಗೆ ಹೆಚ್ಚು ಆಪ್ತರಾಗಿದ್ದಾರೆ. ಕೆಲ ಸೂಕ್ಷ್ಮ ವಿಚಾರಗಳು ಸರ್ಕಾರ ನಿರ್ಧಾರ ಕೈಗೊಂಡ ತಕ್ಷಣ ಸಿದ್ದರಾಮಯ್ಯ ಅವರಿಗೆ ತಲುಪುವುದರ ಹಿಂದೆ ಸಿಎಸ್‌ ಕಚೇರಿಯ ಪಾತ್ರವಿದೆ ಎಂಬ ಗುಮಾನಿ ಬಂದ ಹಿನ್ನೆಲೆಯಲ್ಲಿ ಅವರನ್ನು ಮುಂದುವರೆಸಲು ನೀಡಿದ್ದ ಶಿಫಾರಸು ಪತ್ರವನ್ನು ಸರ್ಕಾರ ಹಿಂಪಡೆದಿದೆ ಎಂದು ಮೂಲಗಳು ಹೇಳಿವೆ.

loader