ಸ್ಲೀಪರ್, ಸೆಕೆಂಡ್ ಕ್ಲಾಸ್ ಮತ್ತು ಎಸಿ-3 ಟಿಕೆಟ್ ದರಗಳು ಏರಿಕೆಯಾಗುವ ಸಾಧ್ಯತೆ ಇದೆ. ಜನರಲ್ ಕಂಪಾರ್ಟ್ಮೆಂಟ್'ನ ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಇರದು.

ನವದೆಹಲಿ(ಡಿ. 11): ರೈಲ್ವೆ ಪ್ರಯಾಣ ದರ ಏರಿಕೆ ಮಾಡುವ ಚಿಂತನೆ ರೈಲ್ವೆ ಇಲಾಖೆಯಲ್ಲಿ ನಡೆದಿದೆ. ಇತ್ತೀಚೆಗೆ ರೈಲು ಅಪಘಾತ ಪ್ರಕರಣಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳಿಗೆ ಹಣ ಹೊಂದಿಸಲು ಈ ಬೆಲೆ ಏರಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಶೇಷ ತೆರಿಗೆ ಮೂಲಕ ರೈಲ್ವೆ ಸುರಕ್ಷಾ ನಿಧಿಯನ್ನು ಒದಗಿಸಬೇಕೆಂದು ರೈಲ್ವೆ ಇಲಾಖೆ ಮಾಡಿಕೊಂಡ ಕೋರಿಕೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿತ್ತು. ಯಾವುದೇ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಬೆಲೆ ಏರಿಕೆ ಮೂಲಕ ನೀವೇ ಹಣ ಹೊಂದಿಸಿಕೊಳ್ಳಿ ಎಂದು ಹಣಕಾಸು ಇಲಾಖೆ ಹೇಳಿದ್ದರಿಂದ ರೈಲ್ವೆ ಇಲಾಖೆಗೆ ಬೆಲೆ ಏರಿಕೆ ನಿರ್ಧಾರ ಕೈಗೊಳ್ಳುವುದು ಬಹುತೇಕ ಅನಿವಾರ್ಯವಾಗಿದೆ. ಸ್ಲೀಪರ್, ಸೆಕೆಂಡ್ ಕ್ಲಾಸ್ ಮತ್ತು ಎಸಿ-3 ಟಿಕೆಟ್ ದರಗಳು ಏರಿಕೆಯಾಗುವ ಸಾಧ್ಯತೆ ಇದೆ. ಜನರಲ್ ಕಂಪಾರ್ಟ್ಮೆಂಟ್'ನ ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಇರದು. ಈ ಮೊದಲೇ ಸಾಕಷ್ಟು ಬಾರಿ ಬೆಲೆ ಏರಿಕೆ ಕಂಡಿರುವ ಎಸಿ-1 ಮತ್ತು ಎಸಿ-2 ಟಿಕೆಟ್ ದರಗಳಲ್ಲಿ ಯಾವುದೇ ವ್ಯತ್ಯಯ ಮಾಡದಿರಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.

ಮೇಲ್ದರ್ಜೆಗೇರದೇ ಇರುವ ರೈಲ್ವೆ ಹಳಿಗಳು, ಅಸಮರ್ಪಕ ಸಿಗ್ನಲ್ ವ್ಯವಸ್ಥೆಯಿಂದಾಗಿ ರೈಲು ಹಳಿ ತಪ್ಪುವ ಅವಘಡಗಳು ಪದೇ ಪದೇ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಒಂದು ವಿಶೇಷ ರಾಷ್ಟ್ರೀಯ ರೈಲ್ ಸುರಕ್ಷಾ ಕೋಶ್ ಎಂಬ ನಿಧಿಯನ್ನು ಸ್ಥಾಪಿಸಿ ಅದಕ್ಕೆ 1.19 ಲಕ್ಷ ಕೋಟಿ ಹಣ ಒದಗಿಸಲು ನೆರವು ನೀಡಬೇಕೆಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಅವರಿಗೆ ಪತ್ರ ಬರೆದು ಕೋರಿದ್ದರು. ಆದರೆ, ಶೇ.25ರಷ್ಟು ಹಣವನ್ನು ಮಾತ್ರ ನೀಡಲು ರೈಲ್ವೆ ಸಚಿವರ ಒಪ್ಪಿಕೊಂಡಿದ್ದಾರೆ. ಇನ್ನುಳಿದ ಹಣವನ್ನು ಪ್ರಯಾಣ ದರ ಏರಿಕೆ ಮೂಲಕ ಪಡೆದುಕೊಳ್ಳುವಂತೆ ಜೇಟ್ಲಿ ಸೂಚಿಸಿದ್ದಾರೆ.

ಯಾವ್ಯಾವುದರಲ್ಲಿ ಏರಿಕೆ?
* ಸ್ಲೀಪರ್ ಕ್ಲಾಸ್
* ಸೆಕೆಂಡ್ ಕ್ಲಾಸ್
* ಎಸಿ-3