ವಿಶೇಷವೆಂದರೆ ಪ್ರಕರಣದಲ್ಲಿ ಬಂಧಿತ ಸನತ್‌ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 590 ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ.
ಬೆಂಗಳೂರು(ಫೆ.24): ಕಲಿಕೆಯಲ್ಲಿ ಮುಂದಿದ್ದ ಸನತ್ ನಕಲಿ ದಾಖಲೆ ನೀಡಿ ‘ಸತೀಶ್' ಎಂಬ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದ. ಆ ಸಿಮ್ ಕಾರ್ಡ್ ಬಳಸಿ ದುಬಾರಿಯ ಹೆಡ್ಫೋನ್ ಬುಕ್ ಮಾಡಿದ್ದ. ಕಂಪನಿಯ ವರು ಡೆಲಿವರಿ ಮಾಡುವ ವೇಳೆ ಸ್ನೇಹಿತ ರೊಂದಿಗೆ ಸೇರಿ ಕಾರದ ಪುಡಿ ಎರಚಿ ದೋಚಿದ್ದ. ಡೆಲವರಿ ಬಾಯ್ ಮಹೇಶ ದೂರು ನೀಡುವಾಗ ಸಹ ಸತೀಶ್ ಮತ್ತು ಇತರರು ದೋಚಿದ್ದಾಗಿ ದೂರು ನೀಡಿದ್ದರು. ಆದರೆ, ಪೊಲೀಸರು ಆರೋಪಿಗಳನ್ನು ಬಂಧಿಸಿದಾಗಲೇ ಹೆಸರು ಬದಲಿಸಿದ್ದು ಬೆಳಕಿಗೆ ಬಂದಿದೆ.
ಅಮೆಜಾನ್ ಆ್ಯಪ್ನಲ್ಲಿ ಸನತ್ ಆಡಿಯೋ ಪ್ರೊಫೆಷನಲ್ ಸ್ಟುಡಿಯೋ ಮಾನಿಟರ್ ಹೆಡ್ಫೋನ್ ಬುಕ್ ಮಾಡಿದ್ದ. ಅದರಂತೆ ಫೆ.4ರ ಸಂಜೆ ಡೆಲಿವರಿ ಬಾಯ್ ಮಹೇಶ್ ಟಾಟಾ ಏಸ್ ವಾಹನದಲ್ಲಿ ಚಾಲಕ ರಾಮಕೃಷ್ಣ ಅವರೊಂದಿಗೆ ಸನತ್ ತಿಳಿಸಿದ್ದ ವಿಳಾಸದತ್ತ ಹೋಗಿದ್ದರು. ಈ ವೇಳೆ ಮಹೇಶ್ ಮೊಬೈಲ್ಗೆ ಸನತ್ ಕರೆ ಮಾಡಿ ಮಾನಸಿನಗರದ ಮುಖ್ಯರಸ್ತೆ ಬಳಿ ಇರುವುದಾಗಿ ತಿಳಿಸಿದ್ದ. ಅಲ್ಲಿಗೆ ಹೋದಾಗ ಸನತ್ ಟಾಟಾ ಏಸ್ ವಾಹನ ಏರಿ ತಮ್ಮ ಮನೆ ಬೀದಿಯ ಕೊನೆಯಲ್ಲಿರುವುದಾಗಿ ತಿಳಿಸಿ ಕರೆದೊಯ್ದಿದ್ದ. ಮುಂದೆ ಹೋದಂತೆ ರಸ್ತೆ ಬದಿ ನಿಂತಿದ್ದ ಕೆಂಪು ಬಣ್ಣದ ಕಾರ್ನಲ್ಲಿರುವ ತನ್ನ ಅಣ್ಣನಿಂದ ಹಣ ಕೊಡಿಸುವುದಾಗಿ ಹೇಳಿದ್ದ. ಕಾರಿನಲ್ಲಿದ್ದ ಮೂವರಲ್ಲಿ ಒಬ್ಬಾತ ಕಾರ್ಡ್ ನೀಡಿ ಸ್ವೈಪ್ ಮಾಡುತ್ತಿದ್ದಾಗ ಉಳಿದವರು ಮಹೇಶ ಮತ್ತು ವಾಹನದ ಚಾಲಕ ರಾಮಕೃಷ್ಣ ಅವರ ಕಣ್ಣಿಗೆ ಕಾರದ ಪುಡಿ ಎರಚಿದ್ದರು. ಬಳಿಕ ಮಹೇಶ ಬಳಿಯಿದ್ದ ಎಟಿಎಂ ಕಾರ್ಡ್ ಜೊತೆಗೆ .19,998 ಮೌಲ್ಯದ ಆಡಿಯೋ ಪ್ರೊಫೆಷನಲ್ ಸ್ಟುಡಿಯೋ ಮಾನಿಟರ್ ಹೆಡ್ಫೋನ್ (ಮಾಡೆಲ್ ಎಟಿಎಚ್/ಎಂ50ಎಕ್ಸ್) ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು.
ಈ ಕುರಿತು ಮಹೇಶ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರು ದಕ್ಷಿಣ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ಹೆಡ್ ಫೋನ್, ಎಟಿಎಂ ಕಾರ್ಡ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.
