ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ವಿವಿಧೆಡೆ 10 ಡಿಆರ್. 2 ಕೆಎಸ್‌ಆರ್‌ಪಿ, 750 ಪೊಲೀಸ್ ಪೇದೆ, ಮೂವರು ಡಿವೈಎಸ್ಪಿ, ಒಬ್ಬರು ಎಎಸ್‌ಸ್ಪಿ ಹಾಗೂ ಎಸ್ಪಿ ನಿಯೋಜನೆಗೊಂಡಿದ್ದಾರೆ
ಮಂಡ್ಯ(ಜು.10): ಕಾವೇರಿ ನಂದಿ ನೀರು ಹಂಚಿಕೆ ಕುರಿತು ಸುಪ್ರಿಂಕೋರ್ಟ್ ಮಂಗಳವಾರ ವಿಚಾರಣೆ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ವಿವಿಧೆಡೆ 10 ಡಿಆರ್. 2 ಕೆಎಸ್ಆರ್ಪಿ, 750 ಪೊಲೀಸ್ ಪೇದೆ, ಮೂವರು ಡಿವೈಎಸ್ಪಿ, ಒಬ್ಬರು ಎಎಸ್ಸ್ಪಿ ಹಾಗೂ ಎಸ್ಪಿ ನಿಯೋಜನೆಗೊಂಡಿದ್ದಾರೆ.ಈ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ರೈತ ಮುಖಂಡರ ಸಭೆ ನಡೆದಿದ್ದು, ಪೊಲೀಸ್ರು ಸಹ ರೈತರ ಸಭೆ ನಡೆಸಿ, ತಿಳಿ ಹೇಳಿದ್ದಾರೆ.
ಸರ್ಕಾರಕ್ಕೆ ಇಚ್ಛಾಶಕ್ತಿ, ಬದ್ಧತೆ ಕೊರತೆ:
ಮದ್ದೂರು: ಕಾವೇರಿ ವಿವಾದಕ್ಕೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯಸರ್ಕಾರಕ್ಕೆ ಇಚ್ಛಾಶಕ್ತಿ ಮತ್ತು ಬದ್ಧತೆಯ ಕೊರತೆ ಇದೆ ಎಂದು ತುಮಕೂರು ಜಿಲ್ಲೆ ಶಿರಾದ ಘಟಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ವಿಷಾದಿಸಿದರು.
ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ದೇಶಹಳ್ಳಿ ಸಮೀಪದ ಮದ್ದೂರಮ್ಮನ ಕೆರೆಯಂಗಳದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಗಂಭೀರ ಪ್ರಯತ್ನವನ್ನೇ ನಡೆಸುತ್ತಿಲ್ಲ. ಇದರ ಪರಿಣಾಮ ಬಹಳಷ್ಟು ವರ್ಷಗಳಿಂದ ಅನ್ಯಾಯವನ್ನು ಎದುರಿಸುತ್ತಾ ಬಂದಿದ್ದೇವೆ. ರಾಜ್ಯಸರ್ಕಾರ ಸರಿಯಾದ ಅಂಕಿ-ಅಂಶಗಳನ್ನು ನ್ಯಾಯಾಲಯಕ್ಕೆ ಒದಗಿಸಿ, ಕಾನೂನು ಹೋರಾಟವನ್ನು ಸಮರ್ಥವಾಗಿ ಮತ್ತು ಪ್ರಬುದ್ಧತೆಯಿಂದ ನಡೆಸಿದರೆ ನಮ್ಮ ನೀರಿನ ಹಕ್ಕನ್ನು ಪಡೆಯಬಹುದು.
ಆದರೆ, ಸರ್ಕಾರ ಪ್ರತಿ ಬಾರಿಯೂ ನ್ಯಾಯಾಲಯಕ್ಕೆ ಅವೈಜ್ಞಾನಿಕ ಅಂಕಿ-ಅಂಶಗಳನ್ನು ಒದಗಿಸುತ್ತಿದೆ. ವಾಸ್ತವ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವಲ್ಲೂ ಎಡವುತ್ತಲೇ ಇದೆ. ಸರ್ಕಾರದ ವೈಫಲ್ಯದಿಂದ ಕಾವೇರಿ ಕಣಿವೆ ಪ್ರದೇಶದ ರೈತರು ಮತ್ತುಜನರು ಸಂಕಷ್ಟಕ್ಕೆ ಸಿಲುಕುವಂತವಾಗಿದೆ ಎಂದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಪರಿಣಮಿಸಿ ಕಾವೇರಿ ಹೋರಾಟ ಜಿಲ್ಲೆಯಲ್ಲಿ ತೀವ್ರತೆ ಪಡೆದುಕೊಂಡರೆ ನಾವು ನಿಮ್ಮೊಂದಿಗೆ ಬಂದು ನಿಲ್ಲುತ್ತೇವೆ. ಕೇಂದ್ರ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡದೆ, ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಬಾರದು. ಏಕೆಂದರೆ, ರಾಜ್ಯದ ಋಣ ಕೇಂದ್ರದ ಮೇಲಿದೆ. ಕರ್ನಾಟಕದಿಂದ 16 ರಿಂದ 17 ಸೀಟುಗಳನ್ನು ಎನ್ಡಿಎ ಸರ್ಕಾರಕ್ಕೆ ಕೊಡುಗೆ ನೀಡಿದೆ. ಆದರೆ, ತಮಿಳುನಾಡಿನಲ್ಲಿ ಒಂದು ಸೀಟನ್ನೂ ಗೆಲ್ಲದಿದ್ದರೂ ಆ ಜನರ ಹಿತಕಾಯಲು ಬಿಜೆಪಿ ಮುಂದಾಗಿದೆ. ನಾವು ಕಾನೂನು ಬಾಹೀರವಾಗಿ ವಿವಾದ ಬಗೆಹರಿಸುವಂತೆ ಬೇಡುತ್ತಿಲ್ಲ. ನೈಸರ್ಗಿಕ ಸಮಸ್ಯೆಗಳನ್ನು ಅರಿತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
(ಕನ್ನಡಪ್ರಭ ವಾರ್ತೆ)
