ಸಿಲಿಕಾನ್ ಸಿಟಿಯಲ್ಲಿ ನಾಳೆ ಹೋಟೆಲ್ ಗಳಲ್ಲಿ ಊಟ ಸಿಗುವುದಿಲ್ಲ ಇತ್ತ ಮೆಡಿಕಲ್ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ. ಆದರೆ ಕೇಂದ್ರ ಮತ್ತು ಈ ಸಂಘಟನೆಗಳ ನಡುವಿನ ಜಟಾಪಟಿಯಲ್ಲಿ ಪರದಾಡುವ ಸರದಿ ಮಾತ್ರ ಜನಸಾಮಾನ್ಯರದ್ದು.
ಬೆಂಗಳೂರು (ಮೇ.29): ಸಿಲಿಕಾನ್ ಸಿಟಿಯಲ್ಲಿ ನಾಳೆ ಹೋಟೆಲ್ ಗಳಲ್ಲಿ ಊಟ ಸಿಗುವುದಿಲ್ಲ ಇತ್ತ ಮೆಡಿಕಲ್ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ. ಆದರೆ ಕೇಂದ್ರ ಮತ್ತು ಈ ಸಂಘಟನೆಗಳ ನಡುವಿನ ಜಟಾಪಟಿಯಲ್ಲಿ ಪರದಾಡುವ ಸರದಿ ಮಾತ್ರ ಜನಸಾಮಾನ್ಯರದ್ದು.
ನಾಳೆ ನೀವು ಹೋಟೆಲ್ಗಳನ್ನ ನಂಬಿ ಆಫೀಸ್ಗೆ ಬರೋ ಹಾಗಿಲ್ಲ. ಯಾಕಂದ್ರೆ ಯಾವುದೇ ಹೋಟೆಲ್ಗಳಲ್ಲಿ ನಾಳೆ ನಿಮಗೆ ಊಟ ಸಿಗುವುದಿಲ್ಲ. ಈ ಮೂಲಕ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಜಿಎಸ್ಟಿಯನ್ನು ವಿರೋಧೀಸಿ ಹೋಟೆಲ್ಗಳ ಸಂಘ ದಕ್ಷಿಣ ಭಾರತದಾದ್ಯಂತ ಬಂದ್ಗೆ ಕರೆ ನೀಡಿದೆ. ಇನ್ನು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ ಬಂದ್ಗೆ ಕರೆ ನೀಡಿದ್ದು, ಎಲ್ಲಾ ಹೋಟೆಲ್ ಮತ್ತು ಲಾಡ್ಜ್ಗಳು ಸಂಪೂರ್ಣವಾಗಿ ಬಂದ್ ಆಗಲಿವೆ. ಇನ್ನು ಈ ಬೃಹತ್ ಬಂದ್ಗೆ ಬೇಕರಿ ಮತ್ತು ದಾರಿ ಬದಿಯ ಹೋಟೆಲ್ಗಳ ಸಂಘ ಕೂಡ ಬೆಂಬಲ ನೀಡಿದೆ. ಇನ್ನು ಜಿಎಸ್ಟಿ ಅಡಿಯಲ್ಲಿ ಎಸಿ ಹೋಟೆಲ್ಗಳಿಗೆ ಶೇಕಡಾ 12% ರಷ್ಟು ಮತ್ತು ಎಸಿಯೇತರ ಹೋಟೆಲ್ಗಳಿಗೆ ಶೇಕಡಾ 18% ರಷ್ಟು ತೆರಿಗೆ ವಿಧಿಸಲಾಗ್ತಿದ್ದು, ಜುಲೈ 1ರಿಂದ ಜಿಎಸ್ಟಿ ಜಾರಿಯಾಗುತ್ತಿದೆ. ಇನ್ನು ಜಿಎಸ್ಟಿಯ ಈ ತೆರಿಗೆ ಪದ್ಧತಿಯಿಂದಾಗಿ ಒಂದೊಡೆ ಹೋಟೆಲ್ಗಳಿಗೆ ನಷ್ಟವಾದರೆ ಮತ್ತೊಂದೆಡೆ ಗ್ರಾಹಕರಿಗೂ ಬರೆ ಬೀಳಲಿದೆ ಎಂದು ಆರೋಪಿಸಿ ಬಂದ್ಗೆ ಕರೆ ನೀಡಲಾಗಿದೆ.
ಇದೇ ವೇಳೆ ಹೋಟೆಲ್ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿದೆ.ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ನಾಳಿನ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ರಾಜ್ಯ ಹೋಟೆಲ್ ಮಾಲೀಕರ ಸಂಘ ನಾಳೆ ಹೋಟೆಲ್ ಗಳನ್ನು ಮುಚ್ಚದಿರಲು ನಿರ್ಧರಿಸಿದೆ.ಬೆಂಗಳೂರು, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ,ಚಿತ್ರದುರ್ಗದಲ್ಲಿ ಮುಷ್ಕರ ನಡೆಯುವ ಸಾಧ್ಯಗಳಿವೆ.ರಾಜ್ಯ ಹಾಗೂ ನಗರ ಹೋಟೆಲ್ ಸಂಘಟನೆಯಲ್ಲಿ ಒಡಕು ಏರ್ಪಟ್ಟ ಹಿನ್ನೆಲೆಯಲ್ಲಿ ನಾಳಿನ ಮುಷ್ಕರ ನಡೆಯುವುದು ಅನುಮಾನವಾಗಿದೆ.
ಇನ್ನು ಹೋಟೆಲ್ಗಳ ಬಂದ್ ನಿರ್ಧಾರ ಬೆನ್ನಲ್ಲೆ ರಾಷ್ಟ್ರವ್ಯಾಪ್ತಿ ಮೆಡಿಕಲ್ ಶಾಪ್ಗಳ ಬಂದ್ಗೂ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಆನ್ಲೈನ್ನಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿ ರಾಷ್ಟ್ರ ಔಷಧ ವ್ಯಾಪಾರಿಗಳ ಸಂಘ ಬಂದ್ಗೆ ಕರೆ ನೀಡಿದೆ. ಅಲ್ಲದೆ ಬಂದ್ಗೆ ಬೆಂಬಲಿಸಿ ಟೌನ್ಹಾಲ್ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಹಾಗೆ ಬೆಂಗಳೂರು ನಗರಾದ್ಯಂತ 8500 ಮತ್ತು ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ಗಳು ಕ್ಲೋಸ್ ಆಗ್ತಿವೆ. ಆದ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಔಷಧಿ ಲಭ್ಯವಾಗಲಿದೆ. ಇನ್ನು ಆನ್ಲೈನ್ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಮೆಡಿಕಲ್ ಶಾಪ್ಗಳಿಗೆ ನಷ್ಟವುಂಟಾಗಲಿದೆ ಎಂದು ಔಷಧ ವ್ಯಾಪಾರ ಸಂಘಟಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಹಿನ್ನೆಲೆಯಲ್ಲಿ ಬಂದ್ಗೆ ಕರೆ ನೀಡಲಾಗಿದೆ
