Asianet Suvarna News Asianet Suvarna News

ಟೊಮಟೋ ದರ ಆಕಾಶಕ್ಕೆ! ಸುಡುತ್ತಿದೆ ಬೆಲೆ

ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ದರ ಹೆಚ್ಚಳವಾಗಿದ್ದು,  ಗ್ರಾಹಕರ ಜೇಬು ಸುಡುತ್ತಿದೆ. 

Tomato prices up as supply takes a hit  in Karnataka
Author
Bengaluru, First Published Apr 22, 2019, 8:42 AM IST

ಬೆಂಗಳೂರು :  ದಿನನಿತ್ಯದ ಅಡುಗೆಗೆ ಅಗತ್ಯವಾದ ಟೊಮಟೋ ಬೆಲೆ ಹೆಚ್ಚಳವಾಗಿದೆ. ಸದ್ಯ ಟೊಮಟೋ ಕೆ.ಜಿಗೆ 40ರಿಂದ 50 ರವರೆಗೆ ಮಾರಾಟವಾಗುತ್ತಿದ್ದು, ಜನಸಾಮಾನ್ಯರಿಗೆ ಬಿಸಿ ತಟ್ಟಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕಳಪೆ ದರ್ಜೆ ಟೊಮಟೋ ಕೆ.ಜಿ.ಗೆ 25-30ಕ್ಕೆ ಮಾರಾಟವಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಕೆ.ಜಿ.ಗೆ 80 ದಾಖಲಿಸಿಕೊಂಡಿದ್ದ ಟೊಮಟೋ ನಂತರದ ದಿನಗಳಲ್ಲಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 10-12ಕ್ಕೆ ಇಳಿಕೆಯಾಗಿತ್ತು. ಮಾರ್ಚ್ ಕೊನೆಯ ವಾರದಲ್ಲಿ 10-20ಕ್ಕೆ ಮಾರಾಟವಾಗಿತ್ತು.

ರಾಜ್ಯದಲ್ಲಿ ಹೆಚ್ಚಿನ ಬೆಳೆ ಬಂದಿದ್ದರಿಂದ ಏಕಾಏಕಿ ಟೊಮಟೋ ಬೆಲೆ ಇಳಿಕೆಯ ಹಾದಿ ಹಿಡಿದಿತ್ತು. ಇದರಿಂದ ಹಾಕಿದ ಬಂಡವಾಳವೂ ಬಾರದೆ ಕಂಗಾಲಾಗಿದ್ದ ಹೆಚ್ಚಿನ ರೈತರು ಈ ಬಾರಿ ಬೆಳೆ ಬೆಳೆಯಲು ಹೆಚ್ಚು ಉತ್ಸಾಹ ತೋರಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟುಟೊಮಟೋ ಪೂರೈಕೆಯಾಗದ ಕಾರಣ, ಬೆಲೆ ಕೊಂಚ ಏರಿಕೆಯಾಗಿದೆ.

ನಾಸಿಕ್‌ನಲ್ಲೂ ಟೊಮಟೋ ಬೆಳೆ ಮುಗಿದಿದೆ. ಇನ್ನೊಂದೆಡೆ ಬೆಂಗಳೂರಿನಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳಕ್ಕೆ ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಟೊಮಟೋ ಬೇಡಿಕೆಗೆ ಅನುಗುಣವಾಗಿ ದೊರೆಯುತ್ತಿಲ್ಲ. ಮಾಚ್‌ರ್‍-ಏಪ್ರಿಲ್‌ ವೇಳೆಗಾಗಲೇ ಟೊಮಟೋ ಬೆಲೆ ಇಳಿಮುಖವಾಗಬೇಕಿತ್ತು. ಆದರೆ, ಕಳೆದ ಬಾರಿ ಕೈಸುಟ್ಟುಕೊಂಡ ಹೆಚ್ಚಿನ ರೈತರು ಬಿತ್ತನೆಗೆ ಆಸಕ್ತಿ ತೋರಿರಲಿಲ್ಲ. ಹಾಗಾಗಿ ಬೆಲೆ ಸ್ವಲ್ಪಮಟ್ಟಿಗೆ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೋಲಾರ, ಚಿಂತಾಮಣಿ, ಹೊಸಕೋಟೆ, ಮಾಲೂರು, ಮದನಪಲ್ಲಿ, ಮಾಗಡಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಬೆಂಗಳೂರು ಕೇಂದ್ರ ಮಾರುಕಟ್ಟೆಗೆ ಟೊಮಟೋ ಬರುತ್ತದೆ. ಕಳೆದ ವಾರ ಸಗಟು ಬೆಲೆ ಕೆ.ಜಿ. 16ರಿಂದ 20 ನಿಗದಿಯಾಗಿತ್ತು. ಈಗ ಸಗಟು ದರ ಕೆ.ಜಿ. 20-32ಕ್ಕೆ ಮಾರಾಟವಾಗುತ್ತಿದೆ. ದಿನವಹಿ ಬರುತ್ತಿದ್ದ ಪ್ರಮಾಣದಲ್ಲಿ ಶೇ.50ರಷ್ಟುಕಡಿಮೆಯಾಗಿದೆ. ಈಗಾಗಲೇ ಟೊಮಟೋ ಬಿತ್ತನೆಯಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಬೆಳೆ ಬರುವುದರಿಂದ ಬೆಲೆ ಕಡಿಮೆಯಾಗಲಿದೆ ಎಂದು ಸಗಟು ಮಾರುಕಟ್ಟೆಯ ಚಂದ್ರಶೇಖರ್‌ ತಿಳಿಸಿದರು.

ಹಾಪ್‌ಕಾಮ್ಸ್‌ನಲ್ಲಿ ಟೊಮಟೋ ಕೆ.ಜಿ. 34ಕ್ಕೆ ಖರೀದಿಯಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಹೈಬ್ರೀಡ್‌ ಕೆ.ಜಿ. 30-35ಕ್ಕೆ ಮಾರಾಟವಾಗುತ್ತಿದೆ. ಸ್ಥಳೀಯವಾಗಿ ರೈತರಿಂದ ನೇರವಾಗಿ ಖರೀದಿಸಲಾಗುತ್ತಿದೆ. ಟೊಮಟೋ ವಾರಕ್ಕೆ 35-40 ಟನ್‌, ಪ್ರತಿದಿನ 5-6 ಟನ್‌ ಪೂರೈಕೆಯಾಗುತ್ತದೆ. ಈ ಸಮಯದಲ್ಲಿ ಬೆಲೆ ಕಡಿಮೆ ಇರುತ್ತಿತ್ತು. ಆದರೆ, ರೈತರಿಗೆ ಉತ್ತಮ ಬೆಲೆ ಸಿಗದಿದ್ದರಿಂದ ಬೆಳೆ ಬೆಳೆದಿಲ್ಲ. ಜತೆಗೆ ನೀರಿನ ಅಭಾವವೂ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನುತ್ತಾರೆ ಹಾಪ್‌ಕಾಮ್ಸ್‌ ನಿರ್ದೇಶಕ ಪ್ರಸಾದ್‌.

ತರಕಾರಿ ಬೆಲೆಯಲ್ಲಿ ಸ್ಥಿರತೆ

ನೆರೆ ರಾಜ್ಯಗಳು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಕೆಲ ತರಕಾರಿಗಳು ಬರುತ್ತಿರುವುದರಿಂದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಸಗಟು ಮಾರುಕಟ್ಟೆಯಲ್ಲಿ ಬೀನ್ಸ್‌ ಕೆ.ಜಿ. 80-90, ಕ್ಯಾರೆಟ್‌ ಕೆ.ಜಿ. 24-30, ಕೋಸು 24, ಹಸಿಮೆಣಸಿನಕಾಯಿ ಕೆ.ಜಿ. 40-50, ಬೀಟ್‌ರೂಟ್‌ ಕೆ.ಜಿ. 16-20, ಹಾಗಲಕಾಯಿ ಕೆ.ಜಿ. 36-40 ನಿಗದಿಯಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಆಲೂಗಡ್ಡೆ ಕೆ.ಜಿ. 15-20, ಟೊಮಟೋ ಗುಣಮಟ್ಟಕ್ಕೆ ತಕ್ಕಂತೆ ಕೆ.ಜಿ. 30ರಿಂದ 50, ಈರುಳ್ಳಿ 3 ಕೆ.ಜಿ. 50, ಕ್ಯಾರೆಟ್‌ ಕೆ.ಜಿ. 30-40, ಗೆಡ್ಡೆಕೋಸು ಕೆ.ಜಿ. 30, ಬೆಂಡೆಕಾಯಿ ಕೆ.ಜಿ. 30-40, ನಿಂಬೆಹಣ್ಣು 9ಕ್ಕೆ .40, ಬೀನ್ಸ್‌ ಕೆ.ಜಿ. 80, ಬಟಾಣೆ ಕೆ.ಜಿ. 80, ಹಾಗಲಕಾಯಿ, ಈರೇಕಾಯಿ ಕೆ.ಜಿ. 40-60, ಸೌತೇಕಾಯಿ 20ಕ್ಕೆ ಮಾರಾಟವಾಯಿತು. ಈ ಹಿಂದೆ ಬೆಲೆ ದಾಖಲಿಸಿಕೊಂಡಿದ್ದ ಕೊತ್ತಂಬರಿ ಹಾಗೂ ಇತರೆ ಸೊಪ್ಪುಗಳ ಬೆಲೆಯಲ್ಲಿ ಇಳಿಕೆಯಾಗಿದೆ.

Follow Us:
Download App:
  • android
  • ios