ಪುಟ್ಟ ಮಕ್ಕಳಿಗಿದೆ ಮುಗ್ಧತೆಯಿಂದಲೇ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ| ಪ್ರೀತಿ ಹುಟ್ಟಿಸುವ ಚೆಂದದ ನಗುವಿಗೆ ಇಲ್ಲ  ಪರ್ಯಾಯ| ಸರ್ಕಾರದ ವೈಫಲ್ಯತೆ ಖಂಡಿಸಿ ಲೆಬನಾನ್‌ನಲ್ಲಿ ಭಾರೀ ಪ್ರತಿಭಟನೆ| ಸರ್ಕಾರದ ವಿರುದ್ಧ ಬೀದಿಗಿಳಿದಿರುವ ಲೆಬನಾನ್ ಯುವ ಸಮುದಾಯ| ಮಗುವಿನೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಎಲಿನಾ ಜೊಬ್ಬಾರ್ ಅವರನ್ನು ತಡೆದ ಪ್ರತಿಭಟನಾಕಾರರು| ಮಗುವಿಗೆ ಭಯವಾಗುವಂತೆ ವರ್ತನೆ ತೋರದಂತೆ ತಾಯಿ ಎಲಿನಾ ಮನವಿ| ಮಗು ಕಂಡ ಪ್ರತಿಭಟನಾಕಾರಿಂದ ಬೇಬಿ ಶಾರ್ಕ್ ಹಾಡಿಗೆ ಸ್ಟೆಪ್| 

ಬಿರುಟ್(ಅ.23:) ಮಕ್ಕಳನ್ನು ದೇವರ ಪ್ರತಿರೂಪ ಎನ್ನುತ್ತಾರೆ. ತಮ್ಮ ಮುಗ್ಧತೆಯಿಂದಲೇ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ಕೇವಲ ಪುಟ್ಟ ಮಕ್ಕಳಲ್ಲಿ ಮಾತ್ರ ಕಾಣಲು ಸಾಧ್ಯ. ದ್ವೇಷ ಮರೆಸುವ, ಪ್ರೀತಿ ಹುಟ್ಟಿಸುವ ಅವರ ಚೆಂದದ ನಗುವಿಗೆ ಪರ್ಯಾಯ ಯಾವುದಿದೆ ನೀವೇ ಹೇಳಿ?.

ಅದರಂತೆ ಆರ್ಥಿಕ ಅವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಲೆಬನಾನ್ ಯುವ ಸಮುದಾಯ, ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ವ್ಯವಸ್ಥೆಯ ವಿರುದ್ಧದ ಆಕ್ರೋಶ ಅವರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಸರ್ಕಾರದ ವೈಫಲ್ಯತೆ ಖಂಡಿಸಿ ಲೆಬನಾನ್‌ನಲ್ಲಿ ಪ್ರತಿಭಟನೆ ಜೋರಾಗಿದ್ದು, ರಾಜಧಾನಿ ಬಿರುಟ್‌ನಲ್ಲಿ ಪ್ರತಿಭಟನಾಕಾರರು ಬೀಡು ಬಿಟ್ಟಿದ್ದಾರೆ. ಈ ವೇಳೆ ಮಹಿಳೆಯೋರ್ವರು ತಮ್ಮ ಪುಟ್ಟ ಮಗುವಿನೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪ್ರತಿಭಟನಾಕರರು ಕಾರನ್ನು ಅಡ್ಡಗಟ್ಟಿದ್ದಾರೆ.

ಕೂಡಲೇ ಕಾರಿನಿಂದ ಇಳಿದ ತಾಯಿ ಎಲಿನಾ ಜೊಬ್ಬಾರ್, ಕಾರಿನಲ್ಲಿ ತಮ್ಮ ಪುಟ್ಟ ಮಗು ಮಲಗಿದ್ದು, ಅದಕ್ಕೆ ಭಯವಾಗುವಂತೆ ವರ್ತಿಸಬೇಡಿ ಎಂದು ಮನವಿ ಮಾಡಿದ್ದಾರೆ. ಕಾರಿನಲ್ಲಿ ಮಗು ಇರುವುದನ್ನು ಕಂಡ ಪ್ರತಿಭಟನಾಕಾರರು ಕೂಡಲೇ ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ವಿಶ್ವದಾದ್ಯಂತ ಮಕ್ಕಳ ಜನಪ್ರಿಯ ಹಾಡಾಗಿರುವ ಬೇಬಿ ಶಾರ್ಕ್ ಹಾಆಡನ್ನು ಹಾಡಿದ್ದಾರೆ.

ಪ್ರತಿಭಟನಾಕಾರರು ಬೇಬಿ ಶಾರ್ಕ್ ಹಾಡಿಗೆ ಸ್ಟೆಪ್ ಹಾಕುತ್ತಾ ಮಗುವಿಗೆ ಭಯವಾಗದಂತೆ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರತಿಭಟನಾಕಾರರ ವರ್ತನೆಗೆ ಮೆಚ್ಚುಗೆ ವ್ಯಕ್ತವಾಗಿದೆ.


ಬೇಬಿ ಶಾರ್ಕ್:

ದ.ಕೊರಿಯಾದ ಪಿಂಕ್‌ಫಾಂಗ್ ಕಂಪನಿಯ ಬೇಬಿ ಶಾರ್ಕ್ ಹಾಡು ವಿಶ್ವದಾದ್ಯಂತ ಭಾರೀ ಜನಮನ್ನಣೆ ಗಳಿಸಿದ್ದು, 2016ರಲ್ಲಿ ಬಿಡುಗಡೆ ಮಾಡಲಾದ ಈ ಹಾಡನ್ನು ಯೂಟ್ಯುಬ್‌ನಲ್ಲಿ ಇದುವರೆಗೂ 3.7 ಬಿಲಿಯನ್ ಜನ ವಿಕ್ಷೀಸಿರುವುದು ದಾಖಲೆಯಾಗಿದೆ.