ಈರೋಡ್‌ (ಸೆ. 04): ಕರ್ನಾಟಕದ ಕೊಳ್ಳೇಗಾಲದಲ್ಲಿ ಐವರನ್ನು ಕೊಂದು ಗಲ್ಲು ಶಿಕ್ಷೆಗೆ ಗುರಿಯಾಗಿ, ಬಳಿಕ 2019ರ ಏಪ್ರಿಲ್‌ನಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಕೈದಿಯೊಬ್ಬನನ್ನು ಬಂಧಿಸುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಈರೋಡ್‌ನ ಅಂಥಿಯುರ್‌ ನಿವಾಸಿ ಮುರುಗೇಶನ್‌ (55) ಎಂಬಾತ ತಮಿಳುನಾಡಿನಲ್ಲಿ ಮೂವರನ್ನು ಕೊಂದ ಬಳಿಕ ಅಲ್ಲಿಂದ ಪರಾರಿಯಾಗಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಂದು ವಾಸವಿದ್ದ.

ಅಲ್ಲಿ ಪತ್ನಿಯೊಂದಿಗೆ ವಾಸವಿದ್ದ ವೇಳೆ ಕಬ್ಬಿನ ಹೊಲದಲ್ಲಿ ಇಬ್ಬರು ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದ. ಇದನ್ನ ಪ್ರಶ್ನಿಸಿದ್ದ ಐದು ಜನರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆತನಿಗೆ ಚಾಮರಾಜನಗರ ನ್ಯಾಯಾಲಯ 2017ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

ಗಲ್ಲು ಶಿಕ್ಷೆ ಜಾರಿಯಾದ ಬಳಿಕ ಮುರುಗೇಶನ್‌ನನ್ನು ಬೆಳಗಾವಿ ಹಿಂಜಲಗಾ ಜೈಲಿಗೆ ಹಾಕಲಾಗಿತ್ತು. ಆದರೆ 2019ರ ಏ.22ರಂದು ಆತ ಜೈಲಿನಿಂದ ಪರಾರಿಯಾಗಿದ್ದ. ಆತನಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಬಲೆ ಬೀಸಿದ್ದರು. ಅಂತಿಮವಾಗಿ ಮಂಗಳವಾರ ಮುರುಗೇಶನ್‌ ಕೊಲಾಥುರ್‌ ಸಮೀಪ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.