ಅನುರಾಗ್​ ತಿವಾರಿ ನಿಗೂಢ ಸಾವಿನ ನಂತರ ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅದೆಷ್ಟೋ ಹಗರಣಗಳು ಈಗ ಒಂದೊಂದಾಗಿ ಬೆಳಕಿಗೆ ಬರ್ತಿವೆ. ಇಲಾಖೆಯಲ್ಲಿ ನಡೆದಿರುವ ಹಗರಣಗಳನ್ನು ದಾಖಲೆ ಸಮೇತ ಅನುರಾಗ್​ ತಿವಾರಿ ಪತ್ತೆ ಹಚ್ಚಿದ್ದರು. ಅದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಹಗರಣವನ್ನು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದರು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಮೇ 25ರಂದು ನಿವೃತ್ತ ಐಎಎಸ್​ ಅಧಿಕಾರಿ ಎಂ.ಎನ್​.ವಿಜಯಕುಮಾರ್ ಅವರ ಈ ಮೈಲ್​ಗೆ ವಿಸ್ತೃತ ಮಾಹಿತಿಯೊಂದು ರವಾನೆ ಆಗಿತ್ತು.

ಬೆಂಗಳೂರು(ಜೂ.02): ಕಾಳಸಂತೆಕೋರರ ಪಾಲಾಗಿರೋ ಅನ್ನಭಾಗ್ಯ ಯೋಜನೆ ಅಕ್ಕಿ ಹಗರಣ ಕುರಿತು ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು ಅನ್ನೋದನ್ನ ನಿವೃತ್ತ ಐಎಎಸ್​ ಅಧಿಕಾರಿ ಎಂ.ಎನ್​. ವಿಜಯಕುಮಾರ್​ ನಿನ್ನೆಯಷ್ಟೇ ಬಹಿರಂಗಪಡಿಸಿದ್ದರು. ಇದೇ ಹಗರಣ ಕುರಿತು ಈ- ಮೈಲ್​ನಲ್ಲಿ ವಿವರವಾದ ಮಾಹಿತಿ ದಾಖಲೆಗಳು ಲಭ್ಯ ಇದೆ ಎಂದು ಹೇಳಿದ್ರು. ಇದರ ಬೆನ್ನಲ್ಲೇ ಇವರ ಮಾತುಗಳಿಗೆ ಪೂರಕವಾಗಿ 450 ಕೋಟಿ ರೂಪಾಯಿ ಮೊತ್ತದ ಹಗರಣದ ಮಾಹಿತಿಯನ್ನು ಸುವರ್ಣನ್ಯೂಸ್​ ಈಗ ಬಯಲು ಮಾಡ್ತಿದೆ.

ಅನುರಾಗ್​ ತಿವಾರಿ ನಿಗೂಢ ಸಾವಿನ ನಂತರ ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅದೆಷ್ಟೋ ಹಗರಣಗಳು ಈಗ ಒಂದೊಂದಾಗಿ ಬೆಳಕಿಗೆ ಬರ್ತಿವೆ. ಇಲಾಖೆಯಲ್ಲಿ ನಡೆದಿರುವ ಹಗರಣಗಳನ್ನು ದಾಖಲೆ ಸಮೇತ ಅನುರಾಗ್​ ತಿವಾರಿ ಪತ್ತೆ ಹಚ್ಚಿದ್ದರು. ಅದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಹಗರಣವನ್ನು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದರು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಮೇ 25ರಂದು ನಿವೃತ್ತ ಐಎಎಸ್​ ಅಧಿಕಾರಿ ಎಂ.ಎನ್​.ವಿಜಯಕುಮಾರ್ ಅವರ ಈ ಮೈಲ್​ಗೆ ವಿಸ್ತೃತ ಮಾಹಿತಿಯೊಂದು ರವಾನೆ ಆಗಿತ್ತು.

450 ಕೋಟಿ ಮೊತ್ತದ ಹಗರಣ ಹುತ್ತಕ್ಕೆ ಕೈ ಹಾಕಿದ್ದರೇ ತಿವಾರಿ?

ರಾಜ್ಯದಲ್ಲಿ ಶುಗರ್​ ಲಾಬಿ ಹೇಗೆ ಸದ್ದಿಲ್ಲದೆ ಕಾರ್ಯನಿರ್ವಹಿಸ್ತಿದೆಯೋ ಥೇಟ್​​ ಅದೇ ರೀತಿ ರೈಸ್​ ಮಿಲ್ಲರ್​ಗಳ ಲಾಬಿ ಕೂಡ ಕೆಲಸ ಮಾಡ್ತಿದೆ. ಇಂತಹ ಲಾಬಿಯನ್ನು ಮಟ್ಟ ಹಾಕಲು ಅನುರಾಗ್​ ತಿವಾರಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರು ಅನ್ನೋ ಮಾಹಿತಿ ಈಗ ಬಹಿರಂಗವಾಗಿದೆ. ಈ ಮಾಹಿತಿ ಕುರಿತಾದ ವಿವರಗಳು ನಿವೃತ್ತ ಐಎಎಸ್​ ಅಧಿಕಾರಿ ಎಂ.ಎನ್.ವಿಜಯಕುಮಾರ್​ ಅವ್ರಿಗೆ ಈ ಮೈಲ್​ ಮೂಲಕ ರವಾನೆ ಆಗಿದೆ. ಈ-ಮೈಲ್​​ನಲ್ಲಿರುವ ವಿವರಗಳ ಪ್ರಕಾರ ಅನುರಾಗ್ ತಿವಾರಿ ಬರೋಬ್ಬರಿ 450 ಕೋಟಿ ರೂಪಾಯಿ ಮೊತ್ತದ ಅಕ್ಕಿ ಹಗರಣದ ಹುತ್ತಕ್ಕೆ ಕೈ ಹಾಕಿದ್ದರು. ಬೇಡಿಕೆ ಇಲ್ಲದಿದ್ದರೂ ಅಕ್ಕಿಯನ್ನು ಖರೀದಿಸಿ ಖಾಸಗಿ ಮಿಲ್ಲರ್​ಗಳಿಗೆ ಅನ್ಕೂಲ ಮಾಡ್ಕೊಟ್ಟಿರೋದನ್ನು ತಿವಾರಿ ಪತ್ತೆ ಹಚ್ಚಿದ್ದರು ಅನ್ನೋ ಮಾಹಿತಿ ಈಗ ಲಭ್ಯವಾಗಿದೆ.

ಪ್ರತಿ ವರ್ಷ 10 ಕೋಟಿ ರೂಪಾಯಿ ನಷ್ಟ?

ರೈಸ್​ ಮಿಲ್ಲಿಂಗ್​ಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ್ದು ಒಂದ್​ ಕ್ವಿಂಟಾಲ್​​ ಗೆ ಕೇವಲ 10 ರೂಪಾಯಿ. ಆದ್ರೆ ರಾಜ್ಯದಲ್ಲಿ ರೈಸ್​ ಮಿಲ್ಲಿಂಗ್​ಗೆ ಪಾವತಿ ಆಗಿರೋದು ಒಂದ್​ ಕ್ವಿಂಟಾಲ್​​ಗೆ 45 ರೂಪಾಯಿ. ಕ್ವಿಂಟಾಲ್​​ಗೆ 35 ರೂಪಾಯಿ ವ್ಯತ್ಯಾಸ ಮಾಡಿರೋದ್ರ ಪರಿಣಾಮ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ ಆಗಿದ್ದ ನಷ್ಟದ ಮೊತ್ತ ಬರೋಬ್ಬರಿ 10 ಕೋಟಿ ರೂಪಾಯಿ. ಮಿಲ್ಲರ್​ಗಳಿಗೆ ಅನ್ಕೂಲ ಮಾಡ್ಕೊಟ್ಟು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಮಾಹಿತಿ ಗೊತ್ತಾಗಿದೆ.

ಇದು ಛತ್ತೀಸ್​ಗಡ್​ನ ಅಕ್ಕಿ ಕರ್ಮಕಾಂಡ

ಅನ್ನ ಭಾಗ್ಯ ಯೋಜನೆ ಅಡಿ ಅದೂ ಹೆಚ್ಚುವರಿಯಾಗಿ ಅಕ್ಕಿ ಖರೀದಿ ಮಾಡಿದ್ದರ ಹಿಂದೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಛತ್ತೀಸ್​ಗಡ್​ದಿಂದ ಅಕ್ಕಿ ಖರೀದಿ ಮಾಡಿದ್ದರ ಮೊತ್ತ ಬರೋಬ್ಬರಿ 600 ಕೋಟಿ ರೂಪಾಯಿನದ್ದು. ಖರೀದಿಸಿದ್ದು 2 ಲಕ್ಷ ಮೆಟ್ರಿಕ್​ ಟನ್​ನಷ್ಟು ಅಕ್ಕಿ. ಒಂದು ಕ್ವಿಂಟಾಲ್​​ಗೆ ಕೊಟ್ಟಿದ್ದು 2,500 ರೂಪಾಯಿ. ಆದ್ರೆ, ಎಫ್​ಸಿಐ ಮತ್ತು ಕೇಂದ್ರ ಸರ್ಕಾರದಿಂದ ಒಂದ್​ ಕ್ವಿಂಟಾಲ್​ಗೆ 300 ರೂಪಾಯಿ ಲೆಕ್ಕದಲ್ಲಿ ಅಕ್ಕಿ ಖರೀದಿಸಿತ್ತು. ಅಂದ್ರೆ ಛತ್ತೀಸ್​ಗಡ್​ ರಾಜ್ಯದಿಂದ ಖರೀದಿಸಿದ್ದ ಅಕ್ಕಿಗೆ ಒಂದ್​​ ಕ್ವಿಂಟಾಲ್​ಗೆ ಪಾವತಿಸಿದ್ದು ಬರೋಬ್ಬರಿ 3,000 ರೂಪಾಯಿ. ಈ ಲೆಕ್ಕಾಚಾರವನ್ನು ನೋಡಿದೋರಿಗೆ ಗೊತ್ತಾಗುತ್ತೆ ಛತ್ತೀಸ್​ಗಡ್​ನಿಂದ ಅಕ್ಕಿ ಖರೀದಿಸಿರೋದ್ರಲ್ಲಿ ಸಖತ್​ ಗೋಲ್ಮಾಲ್​ ಆಗ್ಹೋಗಿದೆ ಅನ್ನೋದು.

ಬ್ಲ್ಯಾಕ್​ ಮಾರ್ಕೇಟ್​ ಸೇರಿತ್ತೇ ಛತ್ತೀಸ್​ಗಡ್​ ಅಕ್ಕಿ ?

ವಾಯ್ಸ್​: ಕ್ವಿಂಟಾಲ್​​ಗೆ 3,000 ರೂಪಾಯಿ ಕೊಟ್ಟು ಛತ್ತೀಸ್​ ಗಡ್​ನಿಂದ ಖರೀದಿಸಿದ್ದ ಅಕ್ಕಿ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಿಕ್ಕಿರಲಿಲ್ಲ ಅಂತ ಹೇಳಲಾಗ್ತಿದೆ. ಬದಲಿಗೆ ಕಾಳಸಂತೆಕೋರರ ಕೈಗೆ ಸಿಕ್ಕಿತ್ತು. ಎಫ್​ಸಿಐ ಮತ್ತು ಕೇಂದ್ರ ಸರ್ಕಾರದಿಂದ ತನ್ನ ಕೋಟಾ ಪ್ರಕಾರ ಅಕ್ಕಿ ಪಡೆದಿದ್ದ ರಾಜ್ಯ ಸರ್ಕಾರ, ಅದನ್ನು ಬಳಸಿಕೊಂಡಿರಲಿಲ್ಲ. ಇದರ ಮಧ್ಯೆಯೇ ಛತ್ತೀಸ್​ಗಡ್​ನಿಂದ ಅಕ್ಕಿ ಖರೀದಿಸುವ ಔಚಿತ್ಯವೇನಿತ್ತು ಅನ್ನೋ ಪ್ರಶ್ನೆಯೂ ಈಗ ಎದುರಾಗಿದೆ.

ಅನುರಾಗ್​ ತಿವಾರಿ ನಿಗೂಢ ಸಾವಿನ ಪ್ರಕರಣದ ನಂತರ ಆಹಾರ ನಾಗರೀಕ ಸರಬರಾಜು ಇಲಾಖೆಯಲ್ಲಿ ನಡೆದಿರೋ ಅದೆಷ್ಟೋ ಹಗರಣಗಳು ಈಗ ಸದ್ದು ಮಾಡ್ತಿವೆ. ಆದ್ರೆ ರಾಜ್ಯ ಸರ್ಕಾರ ಮಾತ್ರ ಇದಕ್ಕೂ ತನಗೂ ಯಾವ್ದೇ ಸಂಬಂಧ ಇಲ್ಲ ಅಂತ ಹೇಳ್ತಿದೆ. ಅಕ್ಕಿ ಹಗರಣ ಸೇರಿದಂತೆ ಇಲಾಖೆಯಲ್ಲಿ ನಡೆದಿರೋ ಹಗರಣಗಳ ಕುರಿತು ವಿಶೇಷ ತನಿಖಾ ತಂಡ ನೇಮಿಸಿದಾಗಲೇ ಮಾತ್ರ ತಿವಾರಿ ನಿಗೂಢ ಸಾವಿನ ಹಿಂದಿನ ರಹಸ್ಯ ಗೊತ್ತಾಗುತ್ತೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​