ತಿರುಪತಿ[ಏ.25]: ವಿಶ್ವದ ಅತ್ಯಂತ ಶ್ರೀಮಂತ ದೇವರ ಪೈಕಿ ಒಬ್ಬನಾದ ತಿರುಪತಿಯ ತಿಮ್ಮಪ್ಪ, ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ ಮೊತ್ತ ಭರ್ಜರಿ 12000 ಕೋಟಿ ರು. ದಾಟಿದೆ. ಈ ಠೇವಣಿಯಿಂದಲೇ ತಿಮ್ಮಪ್ಪನಿಗೆ ವಾರ್ಷಿಕ 845 ಕೋಟಿ ರು. ಬಡ್ಡಿ ಆದಾಯ ಬರುತ್ತಿದೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ಹೊತ್ತಿರುವ ಟಿಟಿಡಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಠೇವಣಿ ಮಾಡಿರುವ ಮೊತ್ತವು 12,000 ಕೋಟಿ ರು.ಗಿಂತ ಹೆಚ್ಚಾಗಿದ್ದು, ಈ ಠೇವಣಿಯೊಂದರಿಂದಲೇ ವಾರ್ಷಿಕ 845 ಕೋಟಿ ರು. ಬಡ್ಡಿ ಬರುತ್ತಿದೆ. ಇದಲ್ಲದೇ ದೇಗುಲದ ಬಳಿ 8.7 ಟನ್‌ ಚಿನ್ನ ಸಂಗ್ರಹವಿದೆ.

ಇದನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ. ಈ ಪೈಕಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ 1938 ಕೆಜಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 5387 ಕೆಜಿ ಚಿನ್ನ ಇಡಲಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಇಡಲಾಗಿದ್ದ 1381 ಕೆಜಿ ಚಿನ್ನವನ್ನು ಇತ್ತೀಚೆಗೆ ಮರಳಿ ದೇಗುಲದ ಖಜಾನೆಗೆ ತರಲಾಗಿದೆ. ಇದಲ್ಲದೇ ಸುಮಾರು 550 ಕೆಜಿಯಷ್ಟುಚಿನ್ನಾಭರಣಗಳು ಇವೆ ಎಂದು ಹೇಳಿದೆ.

ಇದೇ ವೇಳೆ ಪ್ರತಿ ವರ್ಷ ವಿಶ್ವದ ವಿವಿಧ ಮೂಲೆಗಳಿಂದ ಸುಮಾರರು 2.5 ಕೋಟಿ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ. ದೇಗುಲವು ವಾರ್ಷಿಕ 3100 ಕೋಟಿ ರು. ಆದಾಯ ಹೊಂದಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.