ನವದೆಹಲಿ(ಮೇ.11): ಅಮೆರಿಕದ ಟೈಮ್‌ ನಿಯತಕಾಲಿಕೆಯ ಮುಖಪುಟವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಲೇಖಕ ಪಾಕಿಸ್ತಾನಿಯಾಗಿದ್ದು, ಪ್ರಧಾನಿ ಮೋದಿ ಗೌರವಕ್ಕ ಧಕ್ಕೆ ತರುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದೆ.

 
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ, ಟೈಮ್ ಮ್ಯಾಗಜಿನ್ ಲೇಖಕ ಪಾಕಿಸ್ತಾನಿಯಾಗಿದ್ದು, ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡುವ ಪಾಕ್ ಅಜೆಂಡಾವನ್ನು ಅನುಸರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಟೈಮ್ ನಿಯತಕಾಲಿಕೆಯ ಲೇಖನವನ್ನು ರಿಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಂಬೀತ್, ಕಾಂಗ್ರೆಸ್ ಅಧ್ಯಕ್ಷರಿಂದ ಇನ್ನೇನೂ ತಾನೇ ನಿರೀಕ್ಷಿಸಲು ಸಾಧ್ಯ ಎಂದು ಕುಹುಕವಾಡಿದ್ದಾರೆ.

ಟೈಮ್ ನಿಯತಕಾಲಿಕೆ ತನ್ನ ಅಂತಾರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಪ್ರಕಟಿಸಿ, ಅದಕ್ಕೆ 'ಇಂಡಿಯಾಸ್‌ ಡಿವೈಡರ್‌ ಇನ್‌ ಚೀಫ್'(ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.