ನವದೆಹಲಿ(ಮೇ.10): 2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದಾಗ ‘ಮೋದಿ ಅಂದರೆ ವ್ಯಾಪಾರ’ ಎಂಬ ಶಿರ್ಷಿಕೆ ನೀಡಿದ್ದ ಅಮೆರಿಕದ ಟೈಮ್ ನಯತಕಾಲಿಕೆ, ಇದೀಗ ಪ್ರಧಾನಿ ಮೋದಿ ವಿರುದ್ಧ ಬೇರೆಯದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ಟೈಮ್‌ ನಿಯತಕಾಲಿಕೆ ತನ್ನ ಅಂತಾರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ  ಫೋಟೋ ಪ್ರಕಟಿಸಿದ್ದು, 'ಇಂಡಿಯಾಸ್‌ ಡಿವೈಡರ್‌ ಇನ್‌ ಚೀಫ್'(ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿ ವಿವಾದ ಸೃಷ್ಟಿಸಿದೆ. 

ಟೈಮ್ ಮ್ಯಾಗಜಿನ್'ನ 20 ರ ಸಂಚಿಕೆಯಲ್ಲಿ ಈ ವಿವಾದಾತ್ಮಕ ಶೀರ್ಷಿಕೆ ನೀಡಲಾಗಿದ್ದು, ಉಪ ಶೀರ್ಷಿಕೆಯಲ್ಲಿ “ಮೋದಿ ದಿ ರಿಫಾರ್ಮರ್‌’(ಮೋದಿ ಓರ್ವ ಸುಧಾರಕ)ಎಂಬ ಸಾಲನ್ನೂ ಸೇರಿಸಿದೆ.

ಪತ್ರಕರ್ತ ಆತೀಶ್‌ ತಸೀರ್‌ ಪ್ರಧಾನಿ ಮೋದಿ ಕುರಿತ ಈ ಲೇಖನ ಬರೆದಿದ್ದು, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇನ್ನು ಐದು ವರ್ಷಗಳ ಕಾಲ ಮೋದಿ ಸರ್ಕಾರವನ್ನು ತಾಳಿಕೊಳ್ಳಲಿದೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಮೂಲಭೂತ ತತ್ವಗಳು, ಅಲ್ಪ ಸಂಖ್ಯಾತರ ಸ್ಥಾನಮಾನಗಳು, ವಿಶ್ವವಿದ್ಯಾಲಯಗಳು ಹಾಗೂ ಮಾಧ್ಯಮ ಸಂಸ್ಥೆಗಳನ್ನು ಹತ್ತಿಕ್ಕಲಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಮೆರೆಯುವಲ್ಲಿ ವಿಫಲವಾಗಿದ್ದು, ಇದು ಮೋದಿ ಅವರಿಗೆ ವರದಾನವಾಗಿದೆ ಎಂದು ಲೆಖನದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಇನ್ನು ಟೈಮ್ ಮ್ಯಾಗಜಿನ್ ಲೇಖನಕ್ಕೆ ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ವಿರೋಧ ವ್ಯಕ್ತವಾಗಿದ್ದು, ತಮ್ಮ ಐದು ವರ್ಷಗಳ ಆಡಳಿತದಲ್ಲಿ ಭಾರತದ ಚಹರೆಯನ್ನೇ ಬದಲಿಸಿದ ವಿಶ್ವ ನಾಯಕನ ಕುರಿತು ಇಂತಹ ಮಾತುಗಳು ಸಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.