‘ಕೆಲವರು ತಮಗೆ ಬಿಜೆಪಿ ಟಿಕೆಟ್ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರ ಹಾಗೂ ಪಕ್ಷದಲ್ಲಿ ಗೊಂದಲ ವಾತಾವರಣ ನಿರ್ಮಾಣ ಮಾಡುತ್ತಿರುವವರನ್ನು ಒಂದು ಕೈ ನೋಡಿಕೊಳ್ಳಿ’ ಎಂದಾಗ ಬೇಳೂರು, ಅಭಿಮಾನಿಗಳಿಂದ ಚಪ್ಪಾಳೆ, ಶೀಟಿ ಗಿಟ್ಟಿಸಿಕೊಂಡರು.
ಶಿವಮೊಗ್ಗ(ಅ.31): ಬಿಜೆಪಿ ಬೂತ್ ಅಧ್ಯಕ್ಷರ ತರಬೇತಿ ಕಾರ್ಯಾಗಾರವು ಸಾಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ನಡುವೆ ಬಲಾಬಲ, ಪರೋಕ್ಷ ಟೀಕೆಯ ವೇದಿಕೆಯಾಗಿ ನಿರ್ಮಾಣವಾಯಿತು. ಪಟ್ಟಣದ ವಿದ್ಯಾಸಂಘ ರಂಗಮಂದಿರದಲ್ಲಿ ಪಕ್ಷದ ವೀಕ್ಷಕ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಬೂತ್ ಸಮಿತಿ ಅಧ್ಯಕ್ಷರ ತರಬೇತಿ ಕಾರ್ಯಕ್ರಮ ನಡೆಯಿತು.
ಮೊದಲು ಮಾತನಾಡಿದ ಗೋಪಾಲಕೃಷ್ಣ ಬೇಳೂರು ಅವರು ಎಚ್.ಹಾಲಪ್ಪರನ್ನು ಮಾಜಿ ಸಚಿವ ಎಂದು ಹೇಳುವ ಬದಲಿಗೆ ಮಾಜಿ ಶಾಸಕ ಎಂದು ಹೇಳುವ ಮೂಲಕ ಪರೋಕ್ಷ ಟೀಕೆ ಆರಂಭಿಸಿದರು. ತಾಲೂಕಿನ ಹೊರಗಿನವರಿಗೆ ಟಿಕೆಟ್ ಬೇಡ. ಇಲ್ಲಿಯವರಿಗೇ ಕೊಡಿ, ಯಾರಿಗಾದರು ಪರವಾಗಿಲ್ಲ. ಬಿ.ಎಸ್. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಮಾಡುವುದೇ ತಮ್ಮ ಹೋರಾಟ’ ಎಂದರು.
‘ಕೆಲವರು ತಮಗೆ ಬಿಜೆಪಿ ಟಿಕೆಟ್ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರ ಹಾಗೂ ಪಕ್ಷದಲ್ಲಿ ಗೊಂದಲ ವಾತಾವರಣ ನಿರ್ಮಾಣ ಮಾಡುತ್ತಿರುವವರನ್ನು ಒಂದು ಕೈ ನೋಡಿಕೊಳ್ಳಿ’ ಎಂದಾಗ ಬೇಳೂರು, ಅಭಿಮಾನಿಗಳಿಂದ ಚಪ್ಪಾಳೆ, ಶೀಟಿ ಗಿಟ್ಟಿಸಿಕೊಂಡರು.
ಅನಂತರ ಮಾತನಾಡಿದ ಹರತಾಳು ಹಾಲಪ್ಪ, ‘ಪಕ್ಷದ ನಿಷ್ಠೆ ಸಿದ್ಧಾಂತ ಬಗ್ಗೆ ಮಾತನಾಡಲು ಕೆಲವರಿಗೆ ಅರ್ಹತೆ ಇಲ್ಲ. ಟಿಕೆಟ್ ಕೊಟ್ಟಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗಿಯೂ ಇಲ್ಲ’ ಎಂದರು. ‘ನಾನೇನು ಟಿಕೆಟ್ ಆಕಾಂಕ್ಷಿ ಎಂದೂ ಹೇಳಿಕೊಂಡಿಲ್ಲ. ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ಬೂತ್ ಮಟ್ಟದ ಪಕ್ಷ ಸಂಘಟನೆಯ ಕೆಲಸ ಮಾಡಲು ಪಕ್ಷದ ವರಿಷ್ಟರು ತಿಳಿಸಿದ್ದಾರೆ. ಆ ಕೆಲಸ ಮಾಡುತ್ತಿದ್ದೇನೆ’ ಎಂದಾಗ ಹಾಲಪ್ಪ ಬೆಂಬಲಿಗರಿಂದ ಶೀಟಿಯ ಸುರಿಮಳೆ ಬಿತ್ತು. ವೇದಿಕೆಯ ಮೇಲೆ ಕೂಡಲೆ ಎದ್ದು ನಿಂತ ಬೇಳೂರು ‘ಶಿಳ್ಳೆ ಹೊಡೆಯಲು ಇದೇನು ಚುನಾವಣಾ ಭಾಷಣವಾ?’ ಎಂದು ಪ್ರಶ್ನಿಸಿದರು.
ಯೋಜನೆ ಹೈಜಾಕ್: ಸಾಗರ-ಸೊರಬ ಕ್ಷೇತ್ರ ವೀಕ್ಷಕ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರ ಸರ್ಕಾರ ಯೋಜನೆಗಳನ್ನು ರಾಜ್ಯ ಸರ್ಕಾರ ಹೈಜಾಕ್ ಮಾಡಿ ತಮ್ಮದೆಂದು ಮತದಾರರಲ್ಲಿ ತಪ್ಪು ಕಲ್ಪನೆ ಬಿಂಬಿಸುತ್ತಿದ್ದಾರೆ. ಇದನ್ನು ಬೂತ್ ಸಮಿತಿ ಸದಸ್ಯರು ಸರಿಪಡಿಸುವಂತೆ ಸಲಹೆ ನೀಡಿದರು. ಪಕ್ಷದ ಮುಖಂಡರಿಗೆ ಸೋಶಿಯಲ್ ಮೀಡಿಯಾ ಬಗ್ಗೆ ಅರಿವು ಇರಲಿ. ಇದರ ಮೂಲಕ ಪ್ರಚಾರ ಹಾಗೂ ಟೀಕೆ ಎರಡನ್ನು ಮಾಡಲು ಅವಕಾಶ ಇದೆ ಎಂದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ದೇವಾನಂದ್, ಯುವರಾಜ, ಉಮೇಶ ಕಂಚುಗಾರ್ ಮತ್ತಿತರರು ಹಾಜರಿದ್ದರು.
