ಟಿಕೆಟ್ ಹಂಚಿಕೆ: ಜೆಡಿಎಸ್‌ಗೆ ಬಿಸಿ ತುಪ್ಪ

First Published 31, Jan 2018, 8:47 PM IST
Ticket Distribution in Old Mysuru Region Leaves JDS Leadership Worried
Highlights
  • ಅತೃಪ್ತರ ಸೆಳೆಯಲು ಬಿಜೆಪಿ, ಕಾಂಗ್ರೆಸ್ ಸಜ್ಜು
  • ಗೊಂದಲ ನಿವಾರಣೆಗೆ ಜೆಡಿಎಸ್‌ ಯತ್ನ

ಬೆಂಗಳೂರು : ಉತ್ತರ ಕರ್ನಾಟಕದತ್ತ ಚಿತ್ತ ಹರಿಸಿರುವ ಜೆಡಿಎಸ್ ವರಿಷ್ಠರಿಗೆ ಪಕ್ಷದ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಟಿಕೆಟ್ ಅಂತಿಮಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

‘ದಳ’ಪತಿಗಳ ಕೋಟೆಯಲ್ಲಿ ಕಾಣಿಸಿಕೊಂಡಿರುವ ಭಿನ್ನರಾಗದ ಲಾಭ ಪಡೆದು ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್‌ನ ಬುಡಕ್ಕೆ ಕೊಡಲಿ ಹಾಕಲು ತಂತ್ರಗಾರಿಕೆ ಹೆಣೆಯುತ್ತಿವೆ. ಇದರ ಸುಳಿವು ಪಡೆದಿರುವ ಜೆಡಿಎಸ್ ವರಿಷ್ಠರು, ಅತೃಪ್ತಿ ಶಮನಗೊಳಿಸಲು ಶ್ರಮಿಸುತ್ತಿದ್ದಾರೆ.

ಹೀಗಾಗಿ ಗೊಂದಲ ನಿವಾರಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಚಿಂತನೆಯಲ್ಲಿ ವರಿಷ್ಠರು ಇದ್ದಾರೆ ಎಂದು ಮೂಲಗಳು ಹೇಳಿವೆ. ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆಯು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಲೆ ನೋವಾಗಿದೆ.

ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಹಾಗೂ ಮಂಡ್ಯ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ದಳಪತಿಗಳಿಗೆ ಸುಲಭವಾಗಿಲ್ಲ. ಶಾಸಕ, ಮುಂಬೈ ಉದ್ಯಮಿ ನಾರಾಯಣಗೌಡ ಅವರಿಗೆ ಎರಡನೇ ಬಾರಿಗೆ ಅವಕಾಶ ನೀಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಸ್ಪಲ್ಪ ತಾಳ-ಮೇಳ ತಪ್ಪಿದರೂ ನಾರಾಯಣಗೌಡ ‘ಕೈ’ ಹಿಡಿಯಲಿದ್ದಾರೆ. ನಾರಾಯಣಗೌಡ ಅವರು ಜೆಡಿಎಸ್ ಭಿನ್ನಮತೀಯರ ಜತೆ ‘ಕೈ’ ಜೋಡಿಸಿ ಕಾಂಗ್ರೆಸ್’ನತ್ತ ಹರಿಸಿದ್ದಾರೆ ಎಂಬ ಮಾತುಗಳಿವೆ.

ಈ ನಡುವೆ, ಇಲ್ಲಿನ ಮಾಜಿ ಶಾಸಕ ಹಾಗೂ ಜೆಡಿಎಸ್ ನಾಯಕ ಪ್ರಕಾಶ್ ಪ್ರಬಲ ಆಕಾಂಕ್ಷಿಗಳಿದ್ದಾರೆ.

ಕೋಟೆಯಲ್ಲಿ ಕಷ್ಟ:

ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.  ದೇವೇಗೌಡ ಕುಟುಂಬದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ತಿಳಿದುಬಂದಿದೆ.

ನಾಯಕ ಜನಾಂಗದ ಪ್ರಭಾವಿ ನಾಯಕ ದಿವಂಗತ ಚಿಕ್ಕಮಾದು ಅವರ ಪುತ್ರ ಅನಿಲ್ ನಾಯಕ ಅವರಿಗೆ ಟಿಕೆಟ್ ನೀಡುವ ಬಗ್ಗೆ ಸ್ಥಳೀಯ ನಾಯಕರಲ್ಲಿ ಒಲವಿದೆ. ಆದರೆ, ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಗೆ ಹೋಗಿದ್ದ ಚಿಕ್ಕಣ್ಣ ಅವರನ್ನು ಎಚ್.ಡಿ. ರೇವಣ್ಣ ಮೂಲಕ ಜೆಡಿಎಸ್‌ಗೆ ಕರೆತರಲಾಗಿದ್ದು, ಚಿಕ್ಕಣ್ಣ ಅವರಿಗೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ತಿಪಟೂರು, ಕೋಲಾರ,ಶಿಡ್ಲಘಟ್ಟ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರ ಹಾಗೂ ಬೆಂಗಳೂರು ನಗರದ ಕೆಲ ಕ್ಷೇತ್ರದಲ್ಲಿಯೂ ಜಿದ್ದಾಜಿದ್ದಿ ಇದೆ.

 

 

loader