Asianet Suvarna News Asianet Suvarna News

ದೇವರನ್ನು ಗಟಾರಕ್ಕೆ ಎಸೆಯಿರಿ: ಭಗವಾನ್

ಎಲ್ಲ ದೇವರನ್ನೂ ಗಟಾರಕ್ಕೆ ಎಸೆಯಿರಿ: ಡಾ. ಭಗವಾನ್‌| ಯಾವ ದೇವರೂ ದಲಿತರು, ಶೂದ್ರರನ್ನು ಉದ್ಧಾರ ಮಾಡಿಲ್ಲ| ಅಂತಹ ದೇವರನ್ನೇಕೆ ಪೂಜಿಸಬೇಕು? ವಿವಾದಾತ್ಮಕ ಹೇಳಿಕೆ

Throw All The Gods to Drainage Says Dr KS Bhagwan
Author
Bangalore, First Published Apr 24, 2019, 9:36 AM IST

ಬೆಂಗಳೂರು[ಏ. 24]: ಸಾವಿರಾರು ವರ್ಷಗಳಿಂದ ಹಲವು ದೇವರುಗಳನ್ನು ಪೂಜಿಸುತ್ತಲೇ ಇದ್ದೇವೆ. ಆದರೆ, ಯಾವ ದೇವರೂ ದಲಿತ, ಹಿಂದುಳಿದ ವರ್ಗದವರನ್ನು ಮತ್ತು ಶೂದ್ರರನ್ನು ಉದ್ಧಾರ ಮಾಡಿಲ್ಲ. ಆದ್ದರಿಂದ ಎಲ್ಲ ದೇವರುಗಳನ್ನು ಗಟಾರಕ್ಕೆ ಎಸೆಯಿರಿ ಎಂದು ವಿಚಾರವಾದಿ ಡಾ.ಕೆ.ಎಸ್‌.ಭಗವಾನ್‌ ಹೇಳಿದರು.

ನಗರದ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ಆಯೋಜಿಸಿದ್ದ ದಿ.ಬಿ.ಬಸವಲಿಂಗಪ್ಪ ಅವರ 95ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಮನು ಸ್ಮೃತಿಯಲ್ಲಿ ಎಲ್ಲ ಕ್ಷುದ್ರರು ಬ್ರಾಹ್ಮಣರ ಗುಲಾಮರು, ಈ ಜನ ಬ್ರಾಹ್ಮಣರ ಸೇವೆ ಮಾಡಲು ಸೃಷ್ಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಸಾವಿರಾರು ವರ್ಷಗಳಿಂದ ಶೋಷಣೆ, ದಬ್ಬಾಳಿಕೆಗೆ ಒಳಗಾಗಿರುವ ದಲಿತರು, ಶೋಷಿತರನ್ನು ದೇವರು ರಕ್ಷಿಸಿಲ್ಲ. ಹೀಗಿರುವಾಗ ಆ ದೇವರನ್ನು ಏಕೆ ಪೂಜಿಸಬೇಕು? ಕೆಳಜಾತಿಯ ಜನರನ್ನು ತುಳಿಯುವುದಕ್ಕಾಗಿಯೇ ದೇವರುಗಳು ಹುಟ್ಟಿಕೊಂಡರು. ದಲಿತರು, ಶೋಷಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುವ ಮೂಲಕ ಎಲ್ಲ ಧರ್ಮಗಳಲ್ಲಿ ರಕ್ತ ಹರಿದಿದೆ. ಆದರೆ ಬೌದ್ಧ ಧರ್ಮದಲ್ಲಿ ಮಾತ್ರ ಅಂತಹ ಸಂಗತಿಗಳು ಕಾಣುವುದಿಲ್ಲ ಎಂದು ಹೇಳಿದರು.

ವಾಲ್ಮೀಕಿ ರಾಮಾಯಣವನ್ನು ಸತತ 2 ವರ್ಷಗಳ ಕಾಲ ಅಧ್ಯಯನ ಮಾಡಿದ್ದೇನೆ. ನಿಜವಾದ ರಾಮ ಯಾರು ಎಂಬುದನ್ನು ಪತ್ತೆಹಚ್ಚಿದ್ದೇನೆ. ವಾಲ್ಮೀಕಿ ಎಲ್ಲೂ ಕೂಡ ರಾಮ ದೇವರು ಎಂದು ಹೇಳುವುದಿಲ್ಲ. ರಾಮನು ಕೂಡ ನಾನು ಮನುಷ್ಯ, ದೇವರಲ್ಲ ಎಂದೇ ಹೇಳುತ್ತಾನೆ. ಈ ಸತ್ಯವನ್ನು ಒಪ್ಪಲು ಯಾರೂ ತಯಾರಿಲ್ಲ ಎಂದ ಅವರು, ಹಿಂದುಳಿದ ವರ್ಗದವರು ಜ್ಞಾನ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಉತ್ತಮ ಹೋರಾಟಗಾರರಾಗಲು ಸಾಧ್ಯವಿಲ್ಲ. ಕೇವಲ ಭಜನೆ ಮಾಡುವುದರಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಭಜನೆ ಮಾಡುವುದು ದೇಶದ ಜನರನ್ನು ದಡ್ಡರನ್ನಾಗಿಸಲು ಎಂದು ವ್ಯಂಗ್ಯವಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ದೇಶದ ಜನರಲ್ಲಿ ಮೇಲು ಕೀಳು, ಭೇದ-ಭಾವ ಮತ್ತು ಜಾತಿ ಮಂತ್ರದ ವಿಷ ಬೀಜ ಬಿತ್ತುತ್ತಿದೆ. ಕೆಲವರು ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಹೇಳುತ್ತಾರೆ. ಅದರ ವಿರುದ್ಧ ಹೋರಾಟ ಮಾಡಲು ಯಾರೂ ಮುಂದೆ ಬರುವುದಿಲ್ಲ. ಸಂವಿಧಾನವನ್ನು ಏಕೆ ತಿದ್ದುಪಡಿ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವ ಎ.ಆರ್‌.ಸೀತಾರಾಮ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಲಿಂಗಪ್ಪ ಅವರು ನೇರ ನಿಷ್ಠೂರ ರಾಜಕಾರಣಿಗಳು. ಸರ್ಕಾರವೇ ಅವರ ಜನ್ಮ ದಿನವನ್ನು ಆಚರಿಸಬೇಕಿತ್ತು. ದಲಿತರ ಏಳಿಗೆಗಾಗಿ ಶ್ರಮಿಸಿ, ಮಲ ಹೊರುವ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿವಾರಿಸಿದ ಆ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಸಮಾರಂಭದಲ್ಲಿ ದಸಂಸ ಸಮತಾವಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ಮಾರಪ್ಪ, ಹೈಕೋರ್ಟ್‌ ಹಿರಿಯ ನ್ಯಾಯವಾದಿ ಎಚ್‌.ಆರ್‌.ವಿಶ್ವನಾಥ್‌, ಪೆರಿಯಾರ್‌ ವಿಚಾರವಾದಿ ಕಲೈಸೆಲ್ವಿ, ದಸಂಸದ ಬೆಂಗಳೂರು ನಗರ ಜಿಲ್ಲೆ ಉಪ ಪ್ರಧಾನ ಸಂಚಾಲಕ ಕೆಂಪಣ್ಣ ಸೇರಿದಂತೆ ಇತತರರು ಉಪಸ್ಥಿತರಿದ್ದರು.

Follow Us:
Download App:
  • android
  • ios