ಮತ್ತೆ ಚುನಾವಣೆಗೆ ಸಜ್ಜಾಗುತ್ತಿದೆ ಕರ್ನಾಟಕ!

Three parliamentary constituencies of Karnataka to face by election soon
Highlights

ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಯಲ್ಲಿ ಬ್ಯುಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ಇರುವ ಕಾಂಗ್ರೆಸ್-ಜೆಡಿಎಸ್ ಸರಕಾರದ ಅಸ್ತಿತ್ವದ ಬಗ್ಗೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಶಾಸಕರನ್ನು ಭೇಟಿಯಾಗುತ್ತಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅದರ ಮಧ್ಯೆಯೇ ಉಪ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. 

ಶಿವಮೊಗ್ಗ: ಕರ್ನಾಟಕದ ಶಾಸಕರಾಗಿ ಆಯ್ಕೆಯಾದ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು, ಸಿ.ಎಸ್.ಪುಟ್ಟರಾಜು ತಮ್ಮ ಸಂಸದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.

ಅದರಲ್ಲಿಯೂ ಯಡಿಯೂರಪ್ಪ ಸ್ಪರ್ಧಿಸಿದ್ದ ಶಿವಮೊಗ್ಗದ ಚುನಾವಣೆ ಮತ್ತೆ ಪ್ರತಿಷ್ಠೆಯ ಪ್ರಶ್ನೆಯಾಗಲಿದ್ದು, ಅವರ ಪುತ್ರ ಬಿ.ವೈ ರಾಘವೇಂದ್ರ ಅವರಿಗೆ ಟಿಕೆಟ್ ಪಕ್ಕಾ ಆಗಿದೆ. 
ಕಾಂಗ್ರೆಸ್ - ಜೆಡಿಎಸ್ ದೋಸ್ತಿಯಿಂದ ಟಿಕೆಟ್‌ಗೆ ಸಿಕ್ಕಾಪಟ್ಟೆ ಪೈಪೋಟಿಯೇ ಆರಂಭವಾಗಿದೆ.

ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮೇಲೆ ರಾಜಕೀಯ ಪಕ್ಷಗಳು ಕಣ್ಣಿಟ್ಟಿದ್ದು, ಶಿವಮೊಗ್ಗ ಲೋಕಸಭಾ ಉಪ ಚುನಾವಣೆಗೆ ಅಖಾಡ ಸಿದ್ದವಾಗ ತೊಡಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಿಂದ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿದು ಶಾಸಕರಾಗಿ ಅಯ್ಕೆಯಾಗುತ್ತಿದ್ದಂತೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸಂಸತ್ತು ಸ್ಥಾನಕ್ಕೆ ಇದೀಗ ಉಪ ಚುನಾವಣೆ ಎದುರಾಗಿದೆ. 

ಬೇಳೂರು ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರಾ?
ಈ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಹಿಂದೆ ಸಂಸದರಾಗಿದ್ದ ಬಿಎಸ್ ವೈ ಪುತ್ರ ರಾಘವೇಂದ್ರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಿದ್ದರೂ ಸಂಸದ ಸ್ಥಾನಕ್ಕೆ ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್, ಮಾಜಿ ಸೂಡಾ ಅಧ್ಯಕ್ಷ ಎಸ್.ದತ್ತಾತ್ರಿ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಕೊನೆಗೆ ಸಂಘಟನೆಯ ಅಂತಿಮ ತೀರ್ಮಾನಕ್ಕೆ ಸೆಡ್ಡು ಹೊಡೆಯುವವರಾರು ಇಲ್ಲ. 
ಸಂಘಟನಾತ್ಮಕವಾಗಿ ಬಿಜೆಪಿ ಲೋಕಸಭಾ ಉಪ ಚುನಾವಣೆ ಎದುರಿಸಲು ಸಿದ್ಧವಾಗಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ದೋಸ್ತಿಗಳ ಕ್ಯಾಂಡಿಡೇಟ್ ಯಾರೆಂಬ ಕುತೂಹಲ ಮೂಡಿದೆ. 

ಕಳೆದ ಬಾರಿ ಯಡಿಯೂರಪ್ಪನವರ ಎದುರು ಕಾಂಗ್ರೆಸ್ ಆಭ್ಯರ್ಥಿಯಾಗಿ ಮಂಜುನಾಥ ಭಂಡಾರಿ, ಜೆಡಿಎಸ್‌ನಿಂದ ಕನ್ನಡದ ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದರು. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿಗಳಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ , ಕಿಮ್ಮನೆ ರತ್ನಾಕರ್ ಸೇರಿದಂತೆ ಕಾಂಗ್ರೆಸ್ ಆಭ್ಯರ್ಥಿಗಳ ಸೋತು ನೆಲ ಕಚ್ಚಿದ್ದರಿಂದ ಕಣಕ್ಕಿಳಿಯಲು ಮಂಜುನಾಥ ಭಂಡಾರಿ ಅಷ್ಟೇನೂ ಉತ್ಸುಕರಾಗಿಲ್ಲ. ಇವರ ಬದಲಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಇವರೊಂದಿಗೆ ಕಿಮ್ಮನೆ ರತ್ನಾಕರ್ , ಕಾಗೋಡು ತಿಮ್ಮಪ್ಪನವರ ಹೆಸರುಗಳು ಕೇಳಿ ಬರುತ್ತಿವೆಯಾದರೂ ಇನ್ನೂ ರಾಜಕೀಯ ಲೆಕ್ಕಾಚಾರ ಪಕ್ಕಾ ಆಗಿಲ್ಲ. 

ಡಾ.ರಾಜ್ ಕುಟುಂಬದ  ಸೊಸೆಯೆಂಬ ಪ್ರಭಾವ, ಮಾಜಿ ಸಿಎಂ ದಿ.ಬಂಗಾರಪ್ಪನವರ ಮಗಳೆಂಬ ಪ್ರಭಾವದ ಜೊತೆಜೊತೆಗೆ ಜಾತಿ ಕಾರಣಕ್ಕಾಗಿ ಜಿಲ್ಲೆಯ ಬಹುಸಂಖ್ಯಾತ ಈಡಿಗ ಓಟ್ ಬ್ಯಾಂಕ್ ಮೇಲೂ ಕಣ್ಣಿಟ್ಟು ರಾಜಕಾರಣ ಮಾಡಿದ್ದರು. ಎಷ್ಟೇ ಯತ್ನಿಸಿದರೂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಚಿತ್ರರಂಗದ ಸ್ಟಾರ್‌ಗಳೆದರು ಮೂರೂವರೆ ಲಕ್ಷಗಳ ಭಾರಿ ಅಮತರದಿಂದ ಗೆಲವು ಸಾಧಿಸಿ ಯಡಿಯೂರಪ್ಪನವರು ಸೂಪರ್ ಸ್ಠಾರ್ ಅಗಿದ್ದರು. ಈ ಬಾರಿಯೂ ಕೂಡ ಕಾಂಗ್ರೆಸ್ ಮೈತ್ರಿ ಜೊತೆಗೆ ಜೆಡಿಎಸ್ ನಿಂದ ಪುನಾ ಗೀತಾ ಶಿವರಾಜ್ ಕುಮಾರ್  ಅವರನ್ನು ಕಣಕ್ಕಿಳಿಸುವುದು ಮಧು ಬಂಗಾರಪ್ಪ ಲೆಕ್ಕಾಚಾರವಾಗಿದೆ. ಅದರೆ ಕಳೆದ ಬಾರಿ ಮೂವರು ಶಾಸಕರನ್ನು ಹೊಂದಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಈ ಬಾರಿ ಜಿಲ್ಲೆಯಲ್ಲಿ ಒಂದೇ ಒಂದು ಶಾಸಕರು ಇಲ್ಲದಿರುವುದರಿಂದ ಜೆಡಿಎಸ್‌ಗೆ ಹೇಳಿಕೊಳ್ಳುವಂಥ ನೆಲೆ ಇಲ್ಲದಿರುವುದೇ ಸಮಸ್ಯೆಯಾಗಿದೆ. 

ಒಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಕಾವೇರಿದ್ದು ಕಾಂಗ್ರೆಸ್ - ಜೆಡಿಎಸ್ ದೋಸ್ತಿಯ ಆಭ್ಯರ್ಥಿ ಯಾರೆಂಬ ಕುತೂಹಲ ರಾಜಕೀಯವಾಗಿ ಕೆರಳಿಸಿದೆ. ತಮ್ಮ ಕೊನೆಯ ಸಂಸತ್ತು ಚುನಾವಣೆಯನ್ನು ಕಾಂಗ್ರೆಸ್‌ನಲ್ಲಿದ್ದ ಎಸ್.ಬಂಗಾರಪ್ಪ , ಜೆಡಿಎಸ್ ಬೆಂಬದೊಂದಿಗೆ ಎದುರಿಸಿದ್ದರಾದರೂ ಸೋಲುಂಡಿದ್ದರು. ಬಿಜೆಪಿ ಭದ್ರಕೋಟೆಯಲ್ಲಿ ಈ ಬಾರಿ ಹಳೆಯ ಫಾರ್ಮುಲಾ ವರ್ಕಔಟ್ ಆಗುತ್ತಾ ಕಾದು ನೋಡಬೇಕು. 


2014 ರ ಲೋಕಸಭಾ ಚುನಾವಣೆ ಫಲಿತಾಂಶ

ಒಟ್ಟು ಮತದಾರರು - 15,62,243 
ಚಲಾವಣೆಯಾದ ಮತಗಳು - 11,29,008 ಶೇ . 72.27 
ಬಿ.ಎಸ್.ಯಡಿಯೂರಪ್ಪ  - ಬಿಜೆಪಿ - 6,06,216
ಮಂಜುನಾಥ ಭಂಡಾರಿ - ಕಾಂಗ್ರೆಸ್ - 2,42,911
ಗೀತಾ ಶಿವರಾಜ್ ಕುಮಾರ್ - ಜೆಡಿಎಸ್ - 2,40,636

loader