ಬೆಂಗಳೂರು(ಅ. 31): ಜೈಲಿನಿಂದ ತಪ್ಪಿಸಿಕೊಂಡು ಪೊಲೀಸ್ ಎನ್'ಕೌಂಟರ್'ನಲ್ಲಿ ಇಂದು ಹತ್ಯೆಯಾದ ಎಂಟು ಶಂಕಿತ ಸಿಮಿ ಉಗ್ರರ ಪೈಕಿ ಮೂವರು ವ್ಯಕ್ತಿಗಳಿಗೆ ಕರ್ನಾಟಕದ ನಂಟಿರುವ ವಿಷಯ ಬೆಳಕಿಗೆ ಬಂದಿದೆ. ಜಾಕೀರ್ ಹುಸೇನ್ ಶೇಖ್, ಮೆಹಬೂಬ್ ಗುಡ್ಡು ಮತ್ತು ಅಮ್ಜದ್ ಅವರು 2013ರಲ್ಲಿ ಧಾರವಾಡದಲ್ಲಿ ಮನೆ ಮಾಡಿಕೊಂಡಿದ್ದು, ರಾಜ್ಯದ ವಿವಿಧ ಕಡೆ ಸಂಪರ್ಕ ಹೊಂದಿದ್ದರೆನ್ನಲಾಗಿದೆ.

ಜಾಕೀರ್, ಮೆಹಬೂಬ್ ಮತ್ತು ಅಮ್ಜದ್ ತಾವು ಬಟ್ಟೆ ವ್ಯಾಪಾರಿಗಳೆಂದು ಹೇಳಿಕೊಂಡು ಧಾರವಾಡದಲ್ಲಿ ಮನೆ ಮಾಡಿಕೊಂಡಿರುತ್ತಾರೆ. ಧಾರವಾಡದಲ್ಲಿದ್ದುಕೊಂಡು ಹುಬ್ಬಳ್ಳಿ, ಗದಗ, ಬೀದರ್ ಮತ್ತು ಕಲಬುರ್ಗಿಯಲ್ಲಿ ಇವರು ಸುತ್ತಾಡಿಕೊಂಡಿರುತ್ತಾರೆ. 2013ರಲ್ಲಿ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟಕ್ಕೆ ಇವರೇ ಸಂಚು ರೂಪಿಸುತ್ತಾರೆ. ಚೆನ್ನೈ ಸ್ಫೋಟದ ಬಳಿಕ ಧಾರವಾಡ ತೊರೆಯುವ ಈ ಮೂವರು ವ್ಯಕ್ತಿಗಳು ಬೀದರ್ ಹಾಗೂ ಹೈದರಾಬಾದ್'ಗೆ ತೆರಳುತ್ತಾರೆ.

ಇವರು ಧಾರವಾಡದಲ್ಲಿ ಮನೆ ಖಾಲಿ ಮಾಡಿದ ಬಳಿಕ ಅಲ್ಲಿಗೆ ಎನ್'ಐಎ ಅಧಿಕಾರಿಗಳು ತನಿಖೆಗೆ ಬಂದಿರುತ್ತಾರೆ. ಅಲ್ಲಿಯವರೆಗೂ ಆ ಮನೆಯ ಮಾಲೀಕರಿಗೆ ಈ ಶಂಕಿತ ಉಗ್ರರ ಬಗ್ಗೆ ಯಾವ ಅನುಮಾನವೂ ಮೂಡಿರುವುದಿಲ್ಲ. ಧಾರವಾಡದ ಮನೆ ತೊರೆದ ಬಳಿಕ ಈ ಮೂರು ಶಂಕಿತ ಸಿಮಿ ಉಗ್ರರ ಜಾಡು ಸಿಗಲಿಲ್ಲವೆನ್ನಲಾಗಿದೆ.