ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಹೈಕಮಾಂಡ್‌ ಜತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಬರುವ ಜುಲೈ ಮೊದಲ ವಾರದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಜಿ. ಪರಮೇಶ್ವರ್‌ ಮುಖಾಮುಖಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಬೆಂಗಳೂರು(ಜೂ.19): ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬರುವ ಜುಲೈ ಮೊದಲ ವಾರದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದೇ ವೇಳೆ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಯನ್ನು ಪ್ರಮುಖ ಅಂಶಗಳನ್ನಾಗಿಟ್ಟುಕೊಂಡು ಚರ್ಚೆ ಮಾಡಲಾಗಿದೆ. ಕೆಪಿಸಿಸಿಯ 45 ಪದಾಧಿಕಾರಿಗಳ ಬದಲಾವಣೆಗೆ ಚಿಂತನೆ ನಡೆಸಿದ್ದು, ಈ ಬಗ್ಗೆ ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆದುಕೊಂಡರು. ಸಚಿವ ಸ್ಥಾನದಿಂದ ನಿರ್ಗಮಿಸಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಸಚಿವ ಸಂಪುಟದಲ್ಲಿ ಖಾಲಿಯಾಗಿರುವ ಸ್ಥಾನಗಳಿಗೆ ಹೊಸದಾಗಿ ಮೂರು ಮಂದಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.
ಲಿಂಗಾಯತ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟಜಾತಿಗಳಿಂದ ತಲಾ ಒಬ್ಬೊಬ್ಬರನ್ನು ಪರಿಗಣಿಸಲಾಗುವುದು. ಪರಿಶಿಷ್ಟಜಾತಿಗೆ ಸಂಬಂಧಿಸಿದಂತೆ ಮೋಟಮ್ಮ ಅವರಿಗೆ ಅವಕಾಶ ನೀಡಬೇಕು ಎಂಬ ಒತ್ತಡ ಇದೆ. ಆದರೆ ಸಿದ್ದರಾಮಯ್ಯ ಎಡ ಪಂಗಡದವರಿಗೆ ನೀಡಬೇಕು ಎಂಬ ನಿಲುವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನರೇಂದ್ರಸ್ವಾಮಿ ಅಥವಾ ಮೋಟಮ್ಮ ಇಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಲಿಂಗಾಯತ ಸಮುದಾಯದಲ್ಲಿ ಅಪ್ಪಾಜಿ ನಾಡಗೌಡ, ಸಿದ್ದು ನ್ಯಾಮಗೌಡ ಅವರ ನಡುವೆ ಪೈಪೋಟಿ ಇದೆ. ಹಿಂದುಳಿದ ವರ್ಗಗಳಲ್ಲಿ ಎಚ್.ವೈ. ಮೇಟಿ ಅವರಿಗೆ ಮತ್ತೆ ಅವಕಾಶ ದೊರೆಯುವ ವಿಶ್ವಾಸವಿದ್ದರೆ ವಿಧಾನಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಹಾಗೂ ಕುಂದಗೋಳ ಶಾಸಕ ಚನ್ನಬಸಪ್ಪ ಎಸ್. ಶಿವಳ್ಳಿ ನಡುವೆ ತೀವ್ರ ಪೈಪೋಟಿ ಇದೆ. ಇದರಲ್ಲಿ ಶಿವಳ್ಳಿಗೆ ಪೂರಕ ವಾತಾವರಣವಿದೆ ಎನ್ನಲಾಗಿದೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಭಾನುವಾರ ಸುದೀರ್ಘ ಚರ್ಚೆ ನಡೆದಿದ್ದು, ಹೈಕಮಾಂಡ್ ಜತೆ ಚರ್ಚಿಸಿ ಅವರ ಸೂಚನೆಯಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸಭಾಪತಿ ಚುನಾವಣೆ ಬಗ್ಗೆ ವರದಿ: ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಸೋಲು ಕಂಡಿರುವುದರಿಂದ ಕಾಂಗ್ರೆಸ್ಗೆ ಮುಖಭಂಗವಾಗಿದೆ. ಈ ಬಗ್ಗೆ ವರದಿ ನೀಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೇಳಿದ್ದಾರೆ. ವರದಿಯಲ್ಲಿ ಯಾವ ಅಂಶಗಳನ್ನು ಉಲ್ಲೇಖ ಮಾಡಬೇಕು ಎಂಬ ಎಂಬ ಬಗ್ಗೆಯೂ ಭಾನುವಾರ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
