ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ವಿಪ್ರೋಗೆ ‘ಬಯೋ ಬಾಂಬ್’ ಹಾಕಿ ಉದ್ಯೋಗಿಗಳನ್ನು ಹತ್ಯೆಗೈಯುವುದಾಗಿ ಕಳೆದ ಮೇ ೫ರಂದು ಬೆದರಿಕೆ ಇ-ಮೇಲ್ ಕಳುಹಿಸಿದ್ದ ದುಷ್ಕರ್ಮಿ ಇದೀಗ ಏಳು ದಿನದೊಳಗೆ ಹಣ ನೀಡದಿದ್ದರೆ ದಾಳಿ ಎದುರಿಸಲು ಸಿದ್ಧರಾಗಿ ಎಂದು ಗುರುವಾರ ಮತ್ತೊಂದು ಮೇಲ್ ಕಳುಹಿಸಿದ್ದಾನೆ. 

ಬೆಂಗಳೂರು (ಜೂ.02): ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ವಿಪ್ರೋಗೆ ‘ಬಯೋ ಬಾಂಬ್’ ಹಾಕಿ ಉದ್ಯೋಗಿಗಳನ್ನು ಹತ್ಯೆಗೈಯುವುದಾಗಿ ಕಳೆದ ಮೇ ೫ರಂದು ಬೆದರಿಕೆ ಇ-ಮೇಲ್ ಕಳುಹಿಸಿದ್ದ ದುಷ್ಕರ್ಮಿ ಇದೀಗ ಏಳು ದಿನದೊಳಗೆ ಹಣ ನೀಡದಿದ್ದರೆ ದಾಳಿ ಎದುರಿಸಲು ಸಿದ್ಧರಾಗಿ ಎಂದು ಗುರುವಾರ ಮತ್ತೊಂದು ಮೇಲ್ ಕಳುಹಿಸಿದ್ದಾನೆ. 
ಈ ಬೆದರಿಕೆ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಸೈಬರ್ ಪೊಲೀಸರ ನೆರವಿನೊಂದಿಗೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ವಿಪ್ರೋ ಕಂಪನಿಗೆ ಬಂದಿರುವ ಎರಡು ಇ-ಮೇಲ್‌ಗಳೂ ಸ್ವಿಜರ್ಲೆಂಡ್‌ನಿಂದ ಬಂದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಜಾಡು ಹಿಡಿದು ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೇಲ್ನೋಟಕ್ಕೆ ಕಂಪನಿಯ ಹಾಲಿ ಅಥವಾ ಮಾಜಿ ಉದ್ಯೋಗಿಯೇ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. 
ಹಣ ಕಳುಹಿಸಲು ನಿಮಗೆ ನೀಡಿದ್ದ ಗಡುವು ಮುಗಿದಿದೆ. ಆದರೂ ನೀವು ಹಣ ಕಳುಹಿಸುವ ವ್ಯವಸ್ಥೆ ಮಾಡಿಲ್ಲ. ಅಂದರೆ, ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ಒಂದು ವಾರ ಕಾಲಾವಕಾಶ ನೀಡುತ್ತಿದ್ದೇವೆ. ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ದಾಳಿ ಎದುರಿಸಲು ಸಜ್ಜಾಗಿ ಎಂದು ಮೇಲ್‌ನಲ್ಲಿ ಬೆದರಿಸಲಾಗಿದೆ.
₹500 ಕೋಟಿ ಹಣವನ್ನು ಬಿಟ್‌ಕಾಯಿನ್ ಮೂಲಕ ನೀಡಬೇಕು. ಹಣ ನೀಡದಿದ್ದರೆ ಸರ್ಜಾಪುರದಲ್ಲಿರುವ ವಿಪ್ರೋ ಕಂಪನಿಯ ಮೇಲೆ ಔಡಲಕಾಯಿ ಬೀಜದಿಂದ ತಯಾರಿಸುವ ಜೈವಿಕ ವಿಷಕಾರಿ ತೈಲವನ್ನು ಕ್ಯಾಂಟೀನ್ ಊಟದಲ್ಲಿ, ಟಾಯ್ಲೆಟ್ ಸೀಟ್ ಹಾಗೂ ಟಾಯ್ಲೆಟ್ ಪೇಪರ್‌ಗಳಿಗೂ ಅಂಟಿಸಲಾಗುತ್ತದೆ ತಿಳಿಯಿತಾ? ಅನುಮಾನವಿದ್ದರೆ ೨ ಗ್ರಾಂ ತೈಲವನ್ನು ಕಚೇರಿಗೆ ಪಾರ್ಸಲ್ ಕಳುಹಿಸುತ್ತೇವೆ ಎಂದು ಮೇಲ್ ಕಳುಹಿಸಲಾಗಿತ್ತು. 
ಈ ಬೆದರಿಕೆಯ ಕಾರಣದಿಂದ ವಿಪ್ರೋ ಕಚೇರಿಗಳ ಬಳಿ ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪ್ರತಿ ಪಾರ್ಸಲ್‌ಗಳನ್ನೂ ಪೊಲೀಸರೇ ಪರಿಶೀಲಿಸಿ ಸಂಬಂಧಪಟ್ಟ ವಿಭಾಗಗಳಿಗೆ ಕಳುಹಿಸುತ್ತಿದ್ದಾರೆ.