ಆ ಊರಿಗೆ ಊರೇ ಆತಂಕದಲ್ಲಿದೆ. ಶಾಲೆಗೆ ಹೋಗಲು ಮಕ್ಕಳು ಭಯಪಡ್ತಾರೆ. ಸಂಜೆಯಾಗುತ್ತಿದ್ದಂತೆ ತಮ್ಮ ತಮ್ಮ ಮನೆಗಳಿಗೆ ಭದ್ರವಾಗಿ ಬೀಗ ಜಡಿದುಕೊಂಡು ಒಳಗೇ ಇರ್ತಾರೆ. ಹೊರಗಡೆ ಬರಲು ಹಿಂದೇಟು ಹಾಕ್ತಾರೆ. ಯಾಕಂತೀರಾ? ಇಲ್ಲಿದೆ ನೋಡಿ ವಿವರ
ಹಾವೇರಿ(ಸೆ.02): ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಅಂಗರಗಟ್ಟಿ ಗ್ರಾಮ. ಈ ಗ್ರಾಮಸ್ಥರು ಮನೆಯಿಂದ ಹೊರಬರಲು ನೂರು ಬಾರಿ ಯೋಚನೆ ಮಾಡ್ತಾರೆ. ಶಾಲೆಗೆ ಹೋಗಲು ಮಕ್ಕಳು ಭಯಪಡ್ತಾರೆ. ಇದಕ್ಕೆ ಕಾರಣ ಚಿರತೆ.
ಹೌದು ಕಳೆದೊಂದು ವಾರದಿಂದಲೂ ಈ ಗ್ರಾಮದಲ್ಲಿ ಅಕ್ಷರಶಃ ಭಯದ ವಾತಾವರಣ ನಿರ್ಮಾಣವಾಗಿದೆ.. ಕಳೆದ ವಾರ ಈ ಗ್ರಾಮದ ಹೊರವಲಯದಲ್ಲಿರೋ ಒಂಟಿ ಮನೆಯೊಂದರಲ್ಲಿ ಚಿರತೆ ಮರಿಯೊಂದು ಒಳನುಗ್ಗಿತ್ತು. ಸುದ್ದಿ ತಿಳಿದು ಗ್ರಾಮಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಯನ್ನ ಸೆರೆಹಿಡಿದಿದ್ದರು. ಆದ್ರೆ ಆ ಚಿರತೆಯ ತಾಯಿ ಜನರನ್ನು ಭಯಭೀತಗೊಳಿಸಿದೆ. ಸಿಕ್ಕಸಿಕ್ಕವರ ಮೇಲೆ ಅಟ್ಯಾಕ್ ಮಾಡ್ತಿದೆ. ಮೊನ್ನೆಯಷ್ಟೆ ಒಂದು ಕುರಿ ಮರಿಯನ್ನು ತಿಂದು ಹಾಕಿದೆ. ಅಲ್ದೇ ತನ್ನ ಮರಿಯನ್ನು ಸೆರೆಹಿಡಿದ ಮನೆಯ ಸುತ್ತಲೇ ಚಿರತೆ ಸುಳಿದಾಡುತ್ತಿದೆ.
ಸಂಜೆಯಾಗುತ್ತಿದ್ದಂತೆ ಗ್ರಾಮದ ತುಂಬೆಲ್ಲ ಸುಳಿದಾಡುತ್ತಿದೆ. ರಾತ್ರಿಯಾದಂತೆ ಈ ಮಾರ್ಗದಲ್ಲಿ ಸಂಚರಿಸೋ ಬೈಕ್ ಸವಾರರಿಗೆ ಚಿರತೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಶಾಲಾ ಮಕ್ಕಳಿಗೂ ಚಿರತೆ ಕಂಡಿದ್ದು ಶಾಲಾ ವಿದ್ಯಾರ್ಥಿಗಳು ಭಯಭೀತರಾಗಿ ಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಇಷ್ಟೇಲ್ಲ ಆದ್ದರೂ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಇನ್ನೂ ಎಚ್ಚರಗೊಂಡಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಅರಣ್ಯ ಇಲಾಖಾಧಿಕಾರಿಗಳು ಚಿರತೆಯನ್ನು ಸೆರೆಹಿಡಿದು, ಗ್ರಾಮಸ್ಥರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕಾಗಿದೆ.
