‘ನಾನು ಮೂರನೆಯ ತರಗತಿಯಲ್ಲಿ ಓದುವಾಗ ನನ್ನ ಅಣ್ಣ ಹೊಲದ ಬದಿಗಳಲ್ಲಿ ಆಲದ ಕೊನೆಗಳನ್ನು ನೆಟ್ಟು ನನಗೆ ನೀರು ಹಾಕಲು ಹೇಳಿದ್ದರು. ನಾನೂ ಬಹಳ ಇಷ್ಟಪಟ್ಟು ನೀರು ಹಾಕುತ್ತಿದ್ದೆ. ಅವು ಬೆಳೆದು ನಿಂತವು. ಈಗ ನಮಗೆಲ್ಲಾ ಅವುಗಳು ನೆರಳಾಗುತ್ತವೆ. ಬೇಸರವಾದಾಗ ಅವುಗಳ ಬಳಿ ಹೋಗಿ ನಿಂತರೆ ಕಾಣದ ಆನಂದ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಕೆಲವು ದಿನ ನೀರಾಕಿ ಬೆಳೆಸಿದ್ದಕ್ಕೆ ಅವು ನಿರಂತರವಾಗಿ ಒಳ್ಳೆಯ ಗಾಳಿ, ನೆರಳು ನೀಡುತ್ತಿವೆ. ಅಂದು ಆಲದ ಗಿಡಗಳಿಗೆ ನೀರಾಕುವ ಕಾಯಕ ನನಗೆ ಅರಿವಿಲ್ಲದಂತೆಯೇ ಸಾಗಿ ಇಂದು ಪರಿಸರ ಪ್ರೀತಿ ಬೆಳೆದು ನಿಂತಿದೆ. ಅದಕ್ಕಾಗಿಯೇ ಯಾರನ್ನೂ ಕೇಳದೇ ನನ್ನ ಪಿಂಚಣಿ ಹಣವನ್ನೇ ಬಳಸಿಕೊಂಡು ಕೈಲಾದಷ್ಟು ಗಿಡಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ.’ ತಾವು ಮಾಡಿರುವ ಕಾರ್ಯದ ಕುರಿತು ಹೀಗೆ ಹೇಳಿಕೊಂಡವರು ಭೂಹಳ್ಳಿ ಪುಟ್ಟಸ್ವಾಮಿ.

ಬೆಂಗಳೂರು (ಜ.09): ‘ನಾನು ಮೂರನೆಯ ತರಗತಿಯಲ್ಲಿ ಓದುವಾಗ ನನ್ನ ಅಣ್ಣ ಹೊಲದ ಬದಿಗಳಲ್ಲಿ ಆಲದ ಕೊನೆಗಳನ್ನು ನೆಟ್ಟು ನನಗೆ ನೀರು ಹಾಕಲು ಹೇಳಿದ್ದರು. ನಾನೂ ಬಹಳ ಇಷ್ಟಪಟ್ಟು ನೀರು ಹಾಕುತ್ತಿದ್ದೆ. ಅವು ಬೆಳೆದು ನಿಂತವು. ಈಗ ನಮಗೆಲ್ಲಾ ಅವುಗಳು ನೆರಳಾಗುತ್ತವೆ. ಬೇಸರವಾದಾಗ ಅವುಗಳ ಬಳಿ ಹೋಗಿ ನಿಂತರೆ ಕಾಣದ ಆನಂದ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಕೆಲವು ದಿನ ನೀರಾಕಿ ಬೆಳೆಸಿದ್ದಕ್ಕೆ ಅವು ನಿರಂತರವಾಗಿ ಒಳ್ಳೆಯ ಗಾಳಿ, ನೆರಳು ನೀಡುತ್ತಿವೆ. ಅಂದು ಆಲದ ಗಿಡಗಳಿಗೆ ನೀರಾಕುವ ಕಾಯಕ ನನಗೆ ಅರಿವಿಲ್ಲದಂತೆಯೇ ಸಾಗಿ ಇಂದು ಪರಿಸರ ಪ್ರೀತಿ ಬೆಳೆದು ನಿಂತಿದೆ. ಅದಕ್ಕಾಗಿಯೇ ಯಾರನ್ನೂ ಕೇಳದೇ ನನ್ನ ಪಿಂಚಣಿ ಹಣವನ್ನೇ ಬಳಸಿಕೊಂಡು ಕೈಲಾದಷ್ಟು ಗಿಡಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ.’ ತಾವು ಮಾಡಿರುವ ಕಾರ್ಯದ ಕುರಿತು ಹೀಗೆ ಹೇಳಿಕೊಂಡವರು ಭೂಹಳ್ಳಿ ಪುಟ್ಟಸ್ವಾಮಿ.

ಚನ್ನಪಟ್ಟಣ ತಾಲೂಕು ಭೂಹಳ್ಳಿ ಗ್ರಾಮದವರಾದ ಇವರು 32 ವರ್ಷಗಳ ಕಾಲ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಒಂದು ಎರಡಲ್ಲ ಬರೊಬ್ಬರಿ ೯ ಉದ್ಯಾನಗಳಲ್ಲಿ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಬರಡು ಭೂಮಿಯನ್ನು ವನವಾಗಿಸಿದರು. ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ ಮೂರು ಎಕರೆ ಪ್ರದೇಶದಲ್ಲಿ ಇವರು ಕವಿವನ ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡಮರಗಳು ಬೆಳೆದು ಬರಡಾಗಿದ್ದ ಪ್ರದೇಶ ಇಂದು ಅರಣ್ಯವಾಗಿದೆ. ಕವಿವನ ಹಲವು ಬಗೆಯ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದೆ.

ಪಕ್ಷಿಗಳಿಗೆ ಆಹಾರದ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ ಸಹಿತ ಹತ್ತಾರು ಹಣ್ಣಿನ ಗಿಡಗಳನ್ನು ನೆಟ್ಟು ಪಕ್ಷಿ ಸಂಕುಲದ ಉಳಿವಿಗೆ ಪಣ ತೊಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ಆಕರ್ಷಣೆ ಎಂದರೆ, 11 ಅಡಿ ಎತ್ತರದ ಬುದ್ಧೇಶ್ವರ ಪ್ರತಿಮೆ. ಅರ್ಧ ಭಾಗ ಬುದ್ಧನಾಗಿ, ಮತ್ತರ್ಧ ಭಾಗ ಈಶ್ವರನಾಗಿರುವ ಇದು ಧರ್ಮ ಸಮ್ಮಿಲನದ ಸಂಕೇತ. ಸುಮಾರು 4.50 ಲಕ್ಷ ರೂ ಖರ್ಚು ಮಾಡಿ ಇಡೀ ಉದ್ಯಾನವನ್ನು ಅಭಿವೃದ್ಧಿ ಪಡಿಸಿರುವ ಪುಟ್ಟಸ್ವಾಮಿ ಅವರು ಇಲ್ಲಿಗೆ ಮೊದಲು ಕವಿವನ ಎಂದು ಹೆಸರಿಟ್ಟಿದ್ದರು. ಈಗ ಅದು ‘ಬುದ್ಧೇಶ್ವರ ಧಾಮ’ವಾಗಿದೆ.

ಹತ್ತಾರು ವನಗಳ ನಿರ್ಮಾತೃ ಪುಟ್ಟಸ್ವಾಮಿ ಅವರ ಸೇವೆ ಕೇವಲ ಒಂದು ವನ ಬೆಳೆಸಲಷ್ಟೇ ಸೀಮಿತವಾಗಿಲ್ಲ. ಚನ್ನಪಟ್ಟಣ ನಗರದ ಸಾರ್ವಜನಿಕ ಉದ್ಯಾನಗಳನ್ನು ಹಸಿರುಮಯವಾಗಿಸಲು ಅವಿರತವಾಗಿ ದುಡಿಯುತ್ತಿದ್ದಾರೆ. ಖಾಲಿ ಜಾಗ ಇರುವ ಕಡೆಯೆಲ್ಲ ಸಸಿಗಳನ್ನು ನೆಟ್ಟು, ಪೋಷಿಸುತ್ತಾ ಬಂದಿದ್ದಾರೆ. ರಸ್ತೆ ಬದಿಗಳಲ್ಲಿಯೂ ಗಿಡ-ಮರಗಳನ್ನು ಬೆಳೆಸುತ್ತಾ ಬಂದಿದ್ದಾರೆ. ಚನ್ನಪಟ್ಟಣ- ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಆವರಣದಲ್ಲಿ ಪಾಳು ಬಿದ್ದಿದ್ದ ಮೂರು ಎಕರೆ ಸರಕಾರಿ ಜಾಗದಲ್ಲಿ ಜೀವೇಶ್ವರ ವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿ ಈಗಾಗಲೇ ನಾನೂರಕ್ಕು ಹೆಚ್ಚು ಗಿಡಗಳನ್ನು ನೆಡಲಾಗಿದೆ. ಮೂರು ವರ್ಷದ ಹಿಂದೆ ನೆಟ್ಟಿರುವ ನೂರಾರು ಸಸಿಗಳು ಇಂದು ಆಳೆತ್ತರಕ್ಕೆ ಬೆಳೆದಿವೆ. ನಾಡಿನ ಇತಿಹಾಸವನ್ನು ನೆನಪಿಸುವಂತೆ ಉದ್ಯಾನಗಳಿಗೆ ಒಂದೊಂದು ಹೆಸರಿಟ್ಟಿದ್ದಾರೆ. ಪುಲಿಕೇಶಿ ವನ, ನೃಪತುಂಗ ವನ, ಕದಂಬ ವನ, ಹೊಯ್ಸಳ ವನ, ಕನ್ನಡ ವನ, ಪಂಪ ವನ ಎಂಬ ಹೆಸರಿನಲ್ಲಿ ಈ ಉದ್ಯಾನಗಳನ್ನು ಗುರುತಿಸಿ ಪೋಷಣೆ ಮಾಡುತ್ತಾ ಬಂದಿದ್ದಾರೆ. ಕರೆದಾಗ ಬರುವ ವಿದ್ಯಾರ್ಥಿಗಳು ಪುಟ್ಟಸ್ವಾಮಿರವರ ಪರಿಸರ ಪ್ರೀತಿ ಸಾಥ್ ನೀಡುತ್ತಿರುವುದು ಅವರ ವಿದ್ಯಾರ್ಥಿವೃಂದ. ಕರೆದಾಗ ಬಂದು, ಗುಂಡಿ ತೋಡಿ ಗಿಡ ನೆಟ್ಟು ನೀರು ಹಾಕಿ ಹೋಗುವ, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಶಿಷ್ಯ ಪಡೆಯ ಬೆಂಬಲ ಪಡೆದು ಅವರಿಂದು ಅಂದು ಕೊಂಡದ್ದನ್ನು ಶೀಘ್ರವಾಗಿ ಮಾಡಿ ಮುಗಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಸೇವಾ ಕಾರ್ಯವನ್ನು ಮೆಚ್ಚಿ ಉದ್ಯಾನವೊಂದಕ್ಕೆ ವಿದ್ಯಾರ್ಥಿವನ ಎಂದೇ ಹೆಸರಿಟ್ಟಿದ್ದಾರೆ. ಪರಿಸರ ಪ್ರೀತಿಯ ಜತೆಗೆ 12 ಸಾಹಿತ್ಯ ಕೃತಿಗಳನ್ನೂ ರಚಿಸಿರುವ ಇವರು, ವರ್ಗಾವಣೆಯಾಗಿ ಹೋದ ಕಡೆಯಲ್ಲೆಲ್ಲಾ ವಿದ್ಯಾರ್ಥಿಗಳಲ್ಲಿ, ಜನರಲ್ಲಿ ಪರಿಸರದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಕಾರಣವಾಗಿಯೇ ಸ್ಥಳೀಯರು ಇವರನ್ನು ಪರಿಸರ ಪೂಜಾರಿ ಎಂದು ಕರೆದು ಗೌರವ ಸಲ್ಲಿಸಿದ್ದಾರೆ. ‘ಕಾಡು ಬೆಳೆಸುವುದರಿಂದ ನಮಗಷ್ಟೇ ಅಲ್ಲದೆ ಇಡೀ ಜೀವರಾಶಿಗೆ ಅನುಕೂಲವಿದೆ. ನಾನು ಈಗ ನಿವೃತ್ತಿಯ ಜೀವನವನ್ನು ನಡೆಸುತ್ತಿದ್ದೇನೆ. ನನಗೆ ಬರುವ ನಿವೃತ್ತಿ ವೇತನದಿಂದ ಉದ್ಯಾನಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಣೆ ಮಾಡುತ್ತಿದ್ದೇನೆ’ ಎನ್ನುವ ಪರಿಸರ ಪ್ರೇಮಿ ಪುಟ್ಟಸ್ವಾಮಿ ಅವರಿಗೆ ನಿಮ್ಮಕಡೆಯಿಂದಲೂ ಒಂದು ಧನ್ಯವಾದ ಇರಲಿ. ದೂ. 99724644038