ಮೋದಿ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಯೋಗ ದಿನ ಘೋಷಣೆ| 180ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆ: ಭಾರತೀಯ ವಿದ್ಯೆಗೆ ಜಾಗತಿಕ ಮೆಚ್ಚುಗೆ

ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದ ಪ್ರಭಾವ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮೊದಲ ಬಾರಿ ಅಧಿಕಾರ ವಹಿಸಿಕೊಂಡ ವರ್ಷವೇ 2014ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವವನ್ನು ಸಾರಿದರು. ಯೋಗವು ವಿಶ್ವ ಶಾಂತಿಗೂ ಪೂರಕ ಎನ್ನುವುದನ್ನು ವಿಶ್ವ ಸಂಸ್ಥೆಯ ಸದಸ್ಯರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟರು. ಆ ವೇಳೆ ವಿಶ್ವ ಸಂಸ್ಥೆಯ ಮುಂದೆ ಯೋಗ ದಿನ ಆಚರಣೆಯ ಪ್ರಸ್ತಾವನೆಯನ್ನು ಮುಂದಿಟ್ಟರು. ಇದನ್ನು ವಿಶ್ವ ಸಂಸ್ಥೆ ಮಾನ್ಯ ಮಾಡಿತು.

ನಂತರ ತನ್ನ ಎಲ್ಲ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಸಂಗ್ರಹಿಸಿ, 2015ರಲ್ಲಿ ಜೂನ್‌ 21ನ್ನು ವಿಶ್ವ ಯೋಗ ದಿನ ಎಂದು ಘೋಷಿಸಿತು. ಅದರೊಂದಿಗೆ, ಭಾರತಕ್ಕಷ್ಟೇ ಸೀಮಿತವಾಗಿದ್ದ, ಕೆಲವು ಆಸಕ್ತ ವಿದೇಶಿಗರಷ್ಟೇ ಮಾಡುತ್ತಿದ್ದ ಯೋಗವನ್ನು ಪ್ರಪಂಚದಾದ್ಯಂತ ಸಾಮೂಹಿಕವಾಗಿ ಅಭ್ಯಸಿಸುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾದರು.

ವಿರೋಧವಿಲ್ಲದೆ 177 ರಾಷ್ಟ್ರಗಳ ಒಪ್ಪಿಗೆ

ಪ್ರಧಾನಿ ಮೋದಿ ಅವರ ಭಾಷಣದ ಬಳಿಕ 2014ರ ಡಿಸೆಂಬರ್‌ 11ರಂದು ವಿಶ್ವ ಸಂಸ್ಥೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಯಿತು. ಭಾರತದ ವಿಶ್ವ ಸಂಸ್ಥೆಯ ಪ್ರತಿನಿಧಿ ಅಶೋಕ್‌ ಮುಖರ್ಜಿ ಅವರು ಕರಡನ್ನು ಸಿದ್ಧಪಡಿಸಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಈ ಕರಡಿಗೆ ಯಾವುದೇ ವಿರೋಧವಿಲ್ಲದೆ 177 ದೇಶಗಳು ಒಪ್ಪಿದವು. ಒಂದೂ ಮತ ಚಲಾವಣೆಯಾಗದೆ ಯೋಗ ದಿನ ಆಚರಣೆಯ ಕರಡು ಪ್ರತಿ ಅಂಗೀಕಾರವಾಯಿತು. ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು. ಇದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಕರಾರು ಇಲ್ಲದೆ, ಹೆಚ್ಚಿನ ಬೆಂಬಲ ಪಡೆದು ಅಂಗೀಕಾರಗೊಂಡ ಮಸೂದೆ ಎಂಬ ಖ್ಯಾತಿಯನ್ನು ಹೊಂದಿದೆ.

ಜೂನ್‌ 21ರಂದೇ ಏಕೆ?

ಇಡೀ ವರ್ಷದಲ್ಲಿ ಜೂನ್‌ 21ರಂದು ಭೂಮಿಯ ಉತ್ತರ ಭಾಗದಲ್ಲಿ ಅಧಿಕ ದಿನ ಇರುತ್ತದೆ. ಅಂದರೆ ಅಂದು ಉತ್ತರ ಭಾಗದಲ್ಲಿ ಹಗಲು ದೀರ್ಘಾವಧಿಯಾಗಿರುತ್ತದೆ. ದಕ್ಷಿಣದಲ್ಲಿ ಹಗಲಿನ ಅವಧಿ ಕಡಿಮೆ ಇರುತ್ತದೆ. ಅಂದು ಸೂರ್ಯ ತನ್ನ ಪಥವನ್ನು ದಕ್ಷಿಣದತ್ತ ಬದಲಿಸುತ್ತಾನೆ. ಅಂದು ಸಾಮಾನ್ಯವಾಗಿ ಹುಣ್ಣಿಮೆಯಾಗಿದ್ದು, ಗುರುಪೂರ್ಣಿಮ ದಿನವಾಗಿರುತ್ತದೆ. ಇದು ಯೋಗ ಮಾಡಲು ಅಥವಾ ಆರಂಭಿಸಲು ಸೂಕ್ತ ದಿನವಾಗಿದೆ. ಹೀಗೆಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಅದನ್ನೂ ವಿಶ್ವಸಂಸ್ಥೆ ಮಾನ್ಯ ಮಾಡಿದೆ.

ಮೊದಲ ವಿಶ್ವ ಯೋಗ ದಿನದ ದಾಖಲೆ

ಭಾರತದಲ್ಲಿ ಯೋಗ ದಿನಕ್ಕೆ ಬೇಕಾದ ತಯಾರಿಯನ್ನು ಕೇಂದ್ರ ಸರ್ಕಾರದ ಆಯುಷ್‌ ಇಲಾಖೆ ವ್ಯವಸ್ಥೆ ಮಾಡುತ್ತದೆ. 2015ರ ಜೂ.21ರಂದು ಆಚರಿಸಲಾದ ಮೊಟ್ಟಮೊದಲ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ, 84 ದೇಶಗಳ ಪ್ರತಿನಿಧಿಗಳು ಸೇರಿದಂತೆ 35,985 ಜನರು ನವದೆಹಲಿಯ ರಾಜಪಥ್‌ನಲ್ಲಿ 35 ನಿಮಿಷ 21 ಆಸನಗಳನ್ನು ಪ್ರದರ್ಶಿಸಿದರು. ಇದನ್ನು ವಿಶ್ವದ ಲಕ್ಷಾಂತರ ಜನ ವೀಕ್ಷಿಸಿದರು. ಏಕಕಾಲದಲ್ಲಿ ಇದು ಎರಡು ಗಿನ್ನೆಸ್‌ ದಾಖಲೆಗಳನ್ನು ಬರೆಯಿತು. ಒಂದೇ ಬಾರಿಗೆ 35,985 ಜನರು ಏಕಕಾಲಕ್ಕೆ ಒಂದೆಡೆ ಯೋಗ ಅಭ್ಯಾಸ ಮಾಡಿದ್ದು ಮೊದಲ ದಾಖಲೆ ಆದರೆ, ಒಂದೇ ಬಾರಿಗೆ 84 ದೇಶದ ಪ್ರತಿನಿಧಿಗಳು ಯೋಗದಲ್ಲಿ ಭಾಗವಹಿಸಿದ್ದು ಮತ್ತೊಂದು ದಾಖಲೆಯಾಯಿತು.

ಅಮೆರಿಕದ ಸ್ಯಾನ್‌ಫ್ರ್ಯಾನ್ಸಿಸ್ಕೋದ ಮರಿನಾ ಗ್ರೀನ್‌ ಪಾರ್ಕ್ನಲ್ಲಿ 5 ಸಾವಿರ ಜನರು ಸಾಮೂಹಿಕವಾಗಿ ಯೋಗ ಮಾಡಿದರು. ಅಲ್ಲದೆ ಜಗತ್ತಿನ ನಾನಾ ದೇಶಗಳಲ್ಲಿ ಭಾರತೀಯರು ಹಾಗೂ ವಿದೇಶಿಗರೂ ಸೇರಿದಂತೆ ಲಕ್ಷಾಂತರ ಜನರು ಯೋಗಾಸನಗಳನ್ನು ಪ್ರದರ್ಶಿಸಿದರು. ಅತ್ತ ಭಾರತದ ಆಯುಷ್‌ ಇಲಾಖೆ 2 ಗಿನ್ನೆಸ್‌ ದಾಖಲೆ ಮಾಡಿದರೆ ಇತ್ತ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತೊಂದು ದಾಖಲೆ ಬರೆದರು. ವಿವಿಧ ಸ್ಥಳಗಳಲ್ಲಿ ಒಂದೇ ಬಾರಿಗೆ ಒಂದೇ ಸಮವಸ್ತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅವರು ಯೋಗದಲ್ಲಿ ಭಾಗವಹಿಸಿದ್ದು ಲಿಮ್ಕಾ ಪುಸ್ತಕದಲ್ಲಿ ದಾಖಲಾಯಿತು.

2016: ವಿಶ್ವಸಂಸ್ಥೆಯಲ್ಲಿ ಸದ್ಗುರು ಜಗ್ಗಿ ಯೋಗ

2015ರ ಯೋಗದ ದಿನದ ಯಶಸ್ಸಿನಿಂದ ಸ್ಫೂರ್ತಿಗೊಂಡ ಭಾರತ ಸರ್ಕಾರವು 2016ರ ವಿಶ್ವ ಯೋಗ ದಿನವನ್ನು ಮತ್ತಷ್ಟುಪರಿಣಾಮಕಾರಿಯಾಗಿ ನಡೆಸಲು ನಿಶ್ಚಯಿಸಿತು. ಆಯುಷ್‌ ಇಲಾಖೆಯು ಯೋಗ ದಿನಕ್ಕೆ ರಾಷ್ಟ್ರೀಯ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ಕಾರ‍್ಯಕ್ರಮ ಎಂದು ನಾಮಕರಣ ಮಾಡಿತು. ಅಂದು ಚಂಡೀಗಢದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಅತ್ತ ವಿಶ್ವ ಸಂಸ್ಥೆಯಲ್ಲಿನ ಭಾರತದ ಶಾಶ್ವತ ವಿಭಾಗವು ಜೂ.20, 21ರಂದು ಯೋಗ ದಿನ ಆಚರಿಸಿತು. ಅಲ್ಲದೆ ವಿಶೇಷ ಕಾರ‍್ಯಕ್ರಮ ಆಯೋಜಿಸಿ ಅದಕ್ಕೆ ‘ಯೋಗ ಸಾಧಕರೊಂದಿಗೆ ಸಂವಾದ- ಸಮಗ್ರ ಅಭಿವೃದ್ಧಿಯ ಗುರಿ ಸಾಧನೆಗಾಗಿ ಯೋಗ’ ಎಂದು ಹೆಸರಿಟ್ಟಿತ್ತು. ಅದಕ್ಕೆ ಈಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು.

2017: ಟೈಮ್ಸ್‌ ಸ್ಕ್ವೇರ್‌ನಲ್ಲಿ ಸಾಮೂಹಿಕ ಯೋಗ

2017ರಲ್ಲಿ ನಡೆದ ಯೋಗ ದಿನ ಹಲವು ಕಾರಣಗಳಿಗಾಗಿ ಮಹತ್ವವನ್ನು ಪಡೆದುಕೊಂಡಿತು. ಉತ್ತರ ಪ್ರದೇಶದ ಲಕ್ನೋದಲ್ಲಿ 51 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗ ಮಾಡಿದರು. ಹಲವು ಉದ್ಯಮಿಗಳು ಯೋಗ ದಿನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅತ್ತ ಅಮೆರಿಕದ ನ್ಯೂಯಾರ್ಕ್ನ ಟೈಮ್ಸ್‌ಸ್ಕೆ$್ವೕರ್‌ನಲ್ಲಿ ಸಾವಿರಾರು ಮಂದಿ ಸೇರಿ ಯೋಗ ಮಾಡಿದರು. ಅದೇ ದಿನ ಚೀನಾದ ಉಕ್ಸಿ ನಗರದಲ್ಲಿ 10 ಸಾವಿರ ಮಂದಿ ಯೋಗ ದಿನದಲ್ಲಿ ಭಾಗವಹಿಸಿದ್ದರು. ಇನ್ನು ಅಥೆನ್ಸ್‌ನಲ್ಲಿ ಗ್ರೀಕ್‌ ಮುಕ್ತ ಯೋಗ ದಿನ ಆಚರಿಸಲಾಯಿತು.

2018: ಲಕ್ಷ ಮಂದಿಯಿಂದ ಯೋಗ ದಾಖಲೆ

2018ರಲ್ಲಿ ನಡೆದ ನಾಲ್ಕನೇ ಯೋಗ ದಿನಕ್ಕೆ ಶಾಂತಿಗಾಗಿ ಯೋಗ ಎಂದು ನಾಮಕರಣ ಆಡಲಾಗಿತ್ತು. ರಾಜಸ್ಥಾನದ ಕೋಟಾದಲ್ಲಿ ನಡೆದ ಕಾರ‍್ಯಕ್ರಮದಲ್ಲಿ 1 ಲಕ್ಷ ಮಂದಿ ಭಾಗವಹಿಸಿ ಯೋಗ ಅಭ್ಯಾಸ ಮಾಡಿದರು. ಇದು ಗಿನ್ನೆಸ್‌ ದಾಖಲೆ ಸೇರಿತು. ಆ ವರ್ಷ ಮೋದಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವರ್ಷ ರಾಂಚಿಯಲ್ಲಿ ಕಾರ‍್ಯಕ್ರಮ

2019ರ ವಿಶ್ವ ಯೋಗ ದಿನದಂದು ಜಾರ್ಖಂಡ್‌ ರಾಜ್ಯದ ರಾಂಚಿಯಲ್ಲಿ ಕೇಂದ್ರ ಸರ್ಕಾರದ ಆಯುಷ್‌ ಇಲಾಖೆಯಿಂದ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ 30 ಸಾವಿರ ಜನರು ಭಾಗಹಿಸುತ್ತಿದ್ದಾರೆ. ಅವರೊಂದಿಗೆ ಪ್ರಧಾನಿ ಮೋದಿ ಯೋಗಾಸನ ಮಾಡಲಿದ್ದಾರೆ.

10 ರೂಪಾಯಿ ನಾಣ್ಯದಲ್ಲಿ ಯೋಗ

ವಿಶ್ವ ಸಂಸ್ಥೆ ವಿಶ್ವ ಯೋಗ ದಿನವನ್ನು ಘೋಷಿಸುತ್ತಿದ್ದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ ತನ್ನ 10 ರುಪಾಯಿ ನಾಣ್ಯದಲ್ಲಿ ಯೋಗದ ಚಿತ್ರವನ್ನು ಪ್ರಕಟಿಸಿದೆ.

ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ. ಇದು ದೇಹ ಮತ್ತು ಮನಸನ್ನು ಒಳಗೊಂಡಿದೆ. ಯೋಚನೆ ಮತ್ತು ಕ್ರಮ, ನಿಯಂತ್ರಣ ಮತ್ತು ಈಡೇರುವಿಕೆ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ ಯೋಗ. ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ. ಯೋಗವು ಬದುಕನ್ನು ಬದಲಿಸುವ ಮತ್ತು ಆತ್ಮಸಾಕ್ಷಿಯ ಸೃಷ್ಟಿ.

- ನರೇಂದ್ರ ಮೋದಿ, ಪ್ರಧಾನಿ

ನೀವೂ ದಿನಕ್ಕೆರಡು ಯೋಗಾಸನ ಕಲಿಯಿರಿ

ಮಯೂರಾಸನ

ಹಸ್ತಗಳ ಆಧಾರದಿಂದ ದೇಹವನ್ನು ಭೂಮಿಗೆ ಸಮಾನಾಂತರವಾಗಿರಿಸುವುದು. ಈ ಭಂಗಿಯಲ್ಲಿ ನಮ್ಮ ದೇಹ ನವಿಲಿನಂತೆ ಕಾಣಿಸುತ್ತದೆ. ಈ ಆಸನದಿಂದ ಅವಶ್ಯಕತೆಗಿಂತ ಹೆಚ್ಚು ಆಹಾರವನ್ನು ಸೇವಿಸಿದರೂ ಸುಲಭವಾಗಿ ಜೀರ್ಣವಾಗುವುದು. ಕೆಲವೇ ದಿನಗಳಲ್ಲಿ ದೇಹದಲ್ಲಿರುವ ಕೊಬ್ಬು ಕಡಿಮೆಯಾಗಿ, ಹೊಟ್ಟೆಯ ಎಲ್ಲ ದೋಷಗಳೂ ನಿವಾರಣೆಯಾಗುತ್ತವೆ. ಕಣ್ಣಿನ ದೃಷ್ಟಿಮಂದವಾಗಿರುವವರು ಈ ಆಸನ ಮಾಡುವುದರಿಂದ ದೃಷ್ಟಿತೀಕ್ಷ$್ಣವಾಗುತ್ತದೆ. ತೋಳುಗಳಿಗೆ ಹೆಚ್ಚಿನ ಶಕ್ತಿ ಬರುವುದರ ಜೊತೆಗೆ ಶ್ವಾಸಕೋಶಕ್ಕೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.

ವೀರಭದ್ರಾಸನ

ಒಂದು ಕಾಲನ್ನು ಮುಂದಕ್ಕಿಟ್ಟು ಮಡಚಿ, ಎರಡೂ ಕೈಗಳನ್ನು ಮೇಲಕ್ಕೆತ್ತಿ ಮುಗಿದು ಯೋಧನಂತೆ ನಿಲ್ಲುವುದು. ಇದು ನಿಮ್ಮ ದೇಹದ ಮೇಲ್ಭಾಗವನ್ನು ಹಿಗ್ಗಿಸಿ, ವ್ಯಾಯಾಮ ನೀಡುತ್ತದೆ. ಎದೆಯನ್ನು ಅಗಲ ಮಾಡುತ್ತದೆ. ಸೊಂಟ, ತೊಡೆ ಹಾಗೂ ಕಾಲುಗಳಿಗೆ ಶಕ್ತಿ ತುಂಬುತ್ತದೆ. ಯಾವಾಗಲೂ ಕುಳಿತು ಕೆಲಸ ಮಾಡುವವರಿಗೆ ಈ ಆಸನ ಒಳ್ಳೆಯದು. ಏಕೆಂದರೆ, ಇದು ಬೆನ್ನುಹುರಿಯ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮನಸ್ಸನ್ನು ರಿಲ್ಯಾಕ್ಸ್‌ ಮಾಡಿ, ದೇಹಕ್ಕೆ ಹೊಸ ಶಕ್ತಿ ತುಂಬುತ್ತದೆ. ವೀರಭದ್ರಾಸನದ ಭಂಗಿಯಲ್ಲಿ ಕಣ್ಮುಚ್ಚಿಕೊಂಡು ನಿಮಿಷಗಟ್ಟಲೆ ನಿಲ್ಲುವುದನ್ನು ಅಭ್ಯಾಸ ಮಾಡಿಕೊಂಡರೆ ಏಕಾಗ್ರತೆ ಹೆಚ್ಚುತ್ತದೆ.