ಆದರೆ ಎಲ್ಲಿಯಾದರೂ ನ್ಯಾಯಾಲಯ, ಕೇಂದ್ರೀಯ ಅಧ್ಯಯನ ತಂಡದ ಭವಿಷ್ಯದ ಲೆಕ್ಕಾಚಾರವನ್ನೇ ಮಾನದಂಡವಾಗಿ ತೆಗೆದುಕೊಂಡು ಈಗಲೇ ನೀರನ್ನು ಬಿಡಿ ಎಂದು ಸೂಚಿಸಿದಲ್ಲಿ ಕರ್ನಾಟಕಕ್ಕೆ ಇನ್ನೊಂದು ಸಂಕಷ್ಟ ಧುತ್ತೆಂದು ಎದುರಾಗಲಿದೆ ಎಂಬುದು ಸ್ಪಷ್ಟ .
ನವದೆಹಲಿ (ಅ.18): ಕಾವೇರಿ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ. ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ. ಕರ್ನಾಟಕದ ಪರ ವಕೀಲರು ಕೋರ್ಟ್ ಮುಂದೆ ಹೇಗೆ ವಾದಿಸಬಹುದು ಎಂಬ ಬಗ್ಗೆ ಇಲ್ಲಿದೆ ವಿವರ:
‘ಕರ್ನಾಟಕದ ಲೆಕ್ಕಾಚಾರ’ದ ವಾದ:
- ಶೇ. 50 ಪ್ರತಿಶತ ಅವಲಂಬನೆ ಪ್ರಕಾರ ಕರ್ನಾಟಕಕ್ಕೆ 56.39 ಟಿಎಂಸಿ ಹರಿದು ಬರಬಹುದು
- ಈಗಿರುವ 32.77 ಟಿಎಂಸಿ ನೀರನ್ನು ಸೇರಿಸಿದರೆ ಕರ್ನಾಟಕಕ್ಕೆ ಒಟ್ಟು 89.16 ಟಿಎಂಸಿ ನೀರು ಸಿಗಲಿದೆ.
- ಕರ್ನಾಟಕಕ್ಕೆ ಕೃಷಿ ಮತ್ತು ಕುಡಿಯುವ ನೀರಿಗಾಗಿ ಬೇಕಾಗಿರುವ ನೀರಿನ ಪ್ರಮಾಣ 65.48 ಟಿಎಂಸಿ; ಕೃಷಿ ಮತ್ತು ಕುಡಿಯುವ ನೀರಿನ ಈ ಅಂದಾಜು ಕಳೆದ 29 ವರ್ಷಗಳ ಅಂದಾಜಿನ ಅನ್ವಯದ ಲೆಕ್ಕಾಚಾರ ಕೇಂದ್ರ ತಂಡ ಹೇಳಿದಂತೆ ಭವಿಷ್ಯದ ನೀರು ಗಣನೆಗೆ ತೆಗೆದುಕೊಂಡರೆ ನಮ್ಮ ಬಳಿ ಹೆಚ್ಚಾಗಿ ಉಳಿಯುವ ನೀರಿನ ಪ್ರಮಾಣ 23.68 ಟಿಎಂಸಿ.
- ಭವಿಷ್ಯದಲ್ಲಿನ ಗಣಿತದ ಸೂತ್ರ ನಂಬಿಕೊಂಡು ವರ್ತಮಾನದಲ್ಲಿ ಶೇಖರಣೆಯಾಗಿರುವ ನೀರು ಬಿಟ್ಟರೆ ಹೇಗೆ? ಕರ್ನಾಟಕಕ್ಕೆ ಮುಂದೆ ನಿರೀಕ್ಷೆಗಿಂತಲೂ ನೀರು ಕಡಿಮೆ ಬಂದಲ್ಲಿ ಮುಂದೇನು ಎನ್ನುವುದು ದೊಡ್ಡ ಪ್ರಶ್ನೆ. ಹೀಗಾಗಿ ಡಿಸೆಂಬರ್ ನಲ್ಲಿ ಲೆಕ್ಕಹಾಕಿದ ನೀರು ಬಂದ ನಂತರವೇ ನಿಷ್ಕರ್ಷೆಗೆ ಬರೋಣ ಎಂದು ಕೋರುವ ಸಾಧ್ಯತೆಗಳಿವೆ.
ತಮಿಳುನಾಡು ವಸ್ತುಸ್ಥಿತಿ:
- ತಮಿಳುನಾಡಿನ 12 ಲಕ್ಷ ಎಕರೆ ಪ್ರದೇಶದಲ್ಲಿ ಕೇವಲ 6.5 ಲಕ್ಷ ಎಕರೆ ಪ್ರದೇಶದಲ್ಲಿ ಮಾತ್ರ ಕೃಷಿ ನಡೆಯುತ್ತಿದೆ. ಅಕ್ಟೋಬರ್ 10ರ ವರೆಗೆ 4.46 ಲಕ್ಷ ಎಕರೆ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ನಡೆದಿದೆ. 2.04 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ನರ್ಸರಿ ಗಿಡಗಳನ್ನು ಹಚ್ಚುವ ಪ್ರಕ್ರಿಯೆ ನಡೆದಿದೆ.
- ಕೇಂದ್ರ ತಂಡ ನೀರಿನ ಲಭ್ಯತೆಯನ್ನು 12 ಲಕ್ಷ ಎಕರೆ ಪ್ರದೇಶಕ್ಕೆ ಅನುಗುಣವಾಗಿ ಲೆಕ್ಕ ಹಾಕಿದೆ,
- ಕೋರ್ಟ್ ಕೇವಲ 6.5 ಲಕ್ಷ ಎಕರೆ ಗಣನೆಗೆ ತೆಗೆದುಕೊಂಡರೆ ನೀರಿನ ಲಭ್ಯತೆಯ ಪ್ರಮಾಣ ಕಡಿಮೆಯಾಗಲಿದೆ. ನೀರಿನ ಲಭ್ಯತೆ ಕಡಿಮೆಯಿದ್ದಲ್ಲಿ ಕೃಷಿ ಚಟುವಟಿಕೆ ನಡೆಸುವ ಭೂಮಿ ಕೂಡ ಕಡಿಮೆ ಮಾಡಬಹುದು.
ಕೇಂದ್ರೀಯ ಅಧ್ಯಯನ ತಂಡದ ವರದಿ:
ಕರ್ನಾಟಕದ ಬಳಿ ಈಗ ಕೇಂದ್ರೀಯ ಅಧ್ಯಯನ ತಂಡವೇ ಹೇಳಿರುವ ಪ್ರಕಾರ ಲಭ್ಯ ನೀರಿನ ಪ್ರಮಾಣ 22.90 ಟಿಎಂಸಿ ಇದ್ದು ಒಂದು ವೇಳೆ ನಮ್ಮದೇ ರೈತರ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಬಿಡಬೇಕೆಂದರು ಕೂಡ ಒಂದು ಬಾರಿ ಕನಿಷ್ಠ 8 ಟಿಎಂಸಿ ನೀರು ಬಿಡಬೇಕು ಅಂದರೆ ನಮ್ಮ ಬಳಿ ಇರುವ ನೀರಿನ ಪ್ರಮಾಣ 15 ಟಿಎಂಸಿಗೆ ಇಳಿಯಲಿದೆ.
ಆಗ ಮೇ 31, 2017ರ ವರೆಗೆ ಕುಡಿಯುವ ನೀರಿನ ಅಗತ್ಯತೆ ಪೂರೈಸುವುದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆ . ಇನ್ನು ಕೇಂದ್ರ ಅಧ್ಯಯನ ತಂಡ ಸಾಂಬಾ ಬೆಳೆಗಳಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ ತಮಿಳುನಾಡಿಗೆ ಮೇ ವರೆಗೆ 162 ಟಿಎಂಸಿ ನೀರು ಬೇಕಾಗಬಹುದು ಎಂದು ಹೇಳಿದ್ದು ಈಶಾನ್ಯ ಮಳೆಯೂ ಸೇರಿದಂತೆ 143 ಟಿಎಂಸಿ ನೀರು ಹರಿದು ಬರಲಿದೆ ಎಂದು ಅಂದಾಜು ಹಾಕಿದ್ದು ಪರೋಕ್ಷವಾಗಿ 20 ಟಿಎಂಸಿ ನೀರು ಕಡಿಮೆಯಾಗುತ್ತದೆ ಎಂದು ತಿಳಿಸಿದೆ.
ಒಂದು ಅಂದಾಜಿನ ಪ್ರಕಾರ ಅಕ್ಟೋಬರ್ 18 ರಿಂದ ಡಿಸೇಂಬರ್ ಅಂತ್ಯದವರೆಗೆ ದಿನಕ್ಕೆ ಒಂದು ಸಾವಿರದಿಂದ ಒಂದೂವರೆ ಸಾವಿರ ಕ್ಯೂಸೆಕ್ಸ್ ನೀರು ಸಾಮಾನ್ಯವಾಗಿ ಹರಿದು ಹೋಗುತ್ತದೆ ಎಂದು ಹೇಳಲಾಗುತ್ತಿದ್ದು ಆ ಪ್ರಕಾರ ಮುಂದಿನ ಮೇ 31ರ ವರೆಗೆ ತಿಂಗಳಿಗೆ ಅಂದಾಜು ಎರಡೂವರೆಯಿಂದ ಮೂರು ಟಿಎಂಸಿ ನೀರು ಹರಿದು ಹೋದರೆ ಸಾಕು ಎಂದು ನ್ಯಾಯಾಲಯ ಹೇಳಿದಲ್ಲಿ ಕರ್ನಾಟಕ ಕಾವೇರಿ ತೂಗುಕತ್ತಿಯಿಂದ ಈ ವರ್ಷ ಪಾರಾಗಬಹುದು. ಆದರೆ ಎಲ್ಲಿಯಾದರೂ ನ್ಯಾಯಾಲಯ ಕೇಂದ್ರೀಯ ಅಧ್ಯಯನ ತಂಡದ ಭವಿಷ್ಯದ ಲೆಕ್ಕಾಚಾರವನ್ನೇ ಮಾನದಂಡವಾಗಿ ತೆಗೆದುಕೊಂಡು ಈಗಲೇ ನೀರನ್ನು ಬಿಡಿ ಎಂದು ಸೂಚಿಸಿದಲ್ಲಿ ಕರ್ನಾಟಕಕ್ಕೆ ಇನ್ನೊಂದು ಸಂಕಷ್ಟ ಧುತ್ತೆಂದು ಎದುರಾಗಲಿದೆ ಎಂಬುದು ಸ್ಪಷ್ಟ .
