ವಿಶ್ವ ಸಮುದಾಯದ ಎಲ್ಲ ಎಚ್ಚರಿಕೆಗಳನ್ನು ಉಪೇಕ್ಷಿಸಿ ಒಂದಾದ ಮೇಲೊಂದರಂತೆ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾಕ್ಕೆ ಪಾಠ ಕಲಿಸಲು ಅಮೆರಿಕ ಸಿದ್ಧವಾಗಿರುವಾ​ಗಲೇ, ಸರ್ವಾಧಿಕಾರಿ ಕಿಮ್‌ ಜಾಂಗ್‌- ಉನ್‌ ಸಡ್ಡು ಹೊಡೆಯಲು ಸಜ್ಜಾಗಿ​ದ್ದಾರೆ. ಉತ್ತರ ಕೊರಿಯಾದ ಸಂಸ್ಥಾ​ಪಕರೂ ಆಗಿರುವ ತಮ್ಮ ತಾತ ಕಿಮ್‌ ಇಲ್‌ ಸಂಗ್‌ ಅವರ 105ನೇ ಜನ್ಮದಿನಾ​ಚರಣೆ (ಸೂರ್ಯನ ದಿನ) ನಿಮಿತ್ತ ಶನಿವಾರ ಮತ್ತೊಂದು ಅಣ್ವಸ್ತ್ರವನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. 

ಸೋಲ್(ಏ.15): ವಿಶ್ವದ ಮೇಲೆ ಮೂರನೇ ಮಹಾ​ಯುದ್ಧದ ಕಾರ್ಮೋಡ ಆವರಿಸಿರುವಾಗಲೇ, ಅಮೆರಿಕ ಹಾಗೂ ಉತ್ತರ ಕೊರಿ​ಯಾ ನಡುವೆ ಸೃಷ್ಟಿ​ಯಾಗಿರುವ ತ್ವೇಷಮಯ ಪರಿಸ್ಥಿತಿ ಶನಿವಾರ ಮಹತ್ವದ ಮಜಲು ತಲುಪುವ ಸಂಭ​ವವಿದ್ದು, ಎರಡೂ ದೇಶಗಳ ನಡುವಣ ಯು​ದ್ಧಕ್ಕೆ ನಾಂದಿ ಹಾಡುವ ಎಲ್ಲ ಲಕ್ಷಣಗಳೂ ಇವೆ.
ವಿಶ್ವ ಸಮುದಾಯದ ಎಲ್ಲ ಎಚ್ಚರಿಕೆಗಳನ್ನು ಉಪೇಕ್ಷಿಸಿ ಒಂದಾದ ಮೇಲೊಂದರಂತೆ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾಕ್ಕೆ ಪಾಠ ಕಲಿಸಲು ಅಮೆರಿಕ ಸಿದ್ಧವಾಗಿರುವಾ​ಗಲೇ, ಸರ್ವಾಧಿಕಾರಿ ಕಿಮ್‌ ಜಾಂಗ್‌- ಉನ್‌ ಸಡ್ಡು ಹೊಡೆಯಲು ಸಜ್ಜಾಗಿ​ದ್ದಾರೆ. ಉತ್ತರ ಕೊರಿಯಾದ ಸಂಸ್ಥಾ​ಪಕರೂ ಆಗಿರುವ ತಮ್ಮ ತಾತ ಕಿಮ್‌ ಇಲ್‌ ಸಂಗ್‌ ಅವರ 105ನೇ ಜನ್ಮದಿನಾ​ಚರಣೆ (ಸೂರ್ಯನ ದಿನ) ನಿಮಿತ್ತ ಶನಿವಾರ ಮತ್ತೊಂದು ಅಣ್ವಸ್ತ್ರವನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. 
ಹಾಗೊಂದು ವೇಳೆ, ಉತ್ತರ ಕೊರಿಯಾ ಮತ್ತೊಂದು ಅಣ್ವಸ್ತ್ರವನ್ನು ಪರೀಕ್ಷೆಗೆ ಒಳಪಡಿಸಿದ್ದೇ ಆದಲ್ಲಿ, ಅದರ ಮೇಲೆ ಯುದ್ಧ ಆರಂಭಿಸಲು ಅಮೆರಿಕ ಸಿದ್ಧವಾಗಿದೆ ಎನ್ನಲಾಗಿದೆ. ನಿಜಕ್ಕೂ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸಿದೆಯೇ ಎಂಬುದು ದೃಢಪಟ್ಟನಂತರ ಈ ದಾಳಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಅಣ್ವಸ್ತ್ರ ಪರೀಕ್ಷೆ ಬಳಿಕ ಹೊರಬರುವ ವಿಕಿರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಅಮೆರಿಕ ತನ್ನ ‘ಅಣು ಶೋಧ' ನೌಕೆಯೊಂದನ್ನು ಜಪಾನ್‌ಗೆ ರವಾನಿಸಿದೆ ಎಂದು ಹೇಳಲಾಗಿದೆ. ಸಿರಿಯಾ, ಆಷ್ಘಾನಿಸ್ತಾ​ನದ ಮೇಲಿನ ದಾಳಿಯ ಹುಮ್ಮಸ್ಸಿನಲ್ಲಿರುವ ಅಮೆರಿಕ ಯುದ್ಧೋತ್ಸಾಹದಲ್ಲಿರುವುದನ್ನು ಅರಿತಿ​ರುವ ಉತ್ತರ ಕೊರಿಯಾ, ಯುದ್ಧ ಅವರಿಗೆ ಇಷ್ಟವಾದರೆ ನಾವೂ ಸಿದ್ಧ ಎಂದು ಸವಾಲು ಹಾಕಿದೆ.
ಈ ನಡುವೆ ಯಾರೇ ಆಗಲಿ ಪ್ರಚೋದನೆ ನೀಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಮಿತ್ರ ರಾಷ್ಟ್ರವಾಗಿರುವ ಚೀನಾ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಸಿರಿಯಾ ಮೇಲೆ ದಾಳಿ ನಡೆಸಿದ ಅಮೆರಿಕ ವಿರುದ್ಧ ಕ್ರುದ್ಧವಾಗಿರುವ ರಷ್ಯಾ ಕೂಡ, ತಾಳ್ಮೆ ವಹಿಸು​ವಂತೆ ಎರಡೂ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ.