ಪರಭಾಷೆಗೆ ಹೋಲಿಸಿದರೆ ಕನ್ನಡದಲ್ಲಿ ಸ್ಟಾರ್ ನಟಿಯರು ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದರೂ ಅದು ಅಷ್ಟೊಂದು ಕಿಕ್ ಕೊಡುತ್ತಿಲ್ಲ. ಇದಕ್ಕೆ ನಾವು ಹಾಡಿಗೆ ನೀಡುತ್ತಿರುವ ಕಳಪೆ ಸಾಹಿತ್ಯವೇ ಕಾರಣವೇ? ಬಿಗ್ರೇಡ್ ಪದಗಳ ಬಳಕೆ, ದೇಹಸಿರಿ ಪ್ರದರ್ಶನಕ್ಕಷ್ಟೇ ಇವು ಸೀಮಿತವಾಗಿದೆಯೇ?
- ಆರ್ ಕೇಶವಮೂರ್ತಿ
ಹಿಂದಿ, ತೆಲುಗು ಭಾಷೆಗಳಂತೆಯೇ ಕನ್ನಡದಲ್ಲೂ ಬೇಡಿಕೆಯ ನಟಿಯರೇ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಾಯಕಿಯರೇ ಗೆಜ್ಜೆ ಕಟ್ಟಿದ ಮೇಲೆ ಹಾಟ್ ಹಾಡುಗಳಿಗೆ ಸ್ಟೆಪ್ಸ್ ಹಾಕಲೆಂದೇ ಬಂದ ನರ್ತಕಿಯರು ಸಂಪೂರ್ಣವಾಗಿ ನಾಪತ್ತೆಯಾಗಿದ್ದಾರೆ! ಹೀಗಾಗಿ ‘ಅ ಅಂಟೆ ಅಮಲಾಪುರಂ’ ಎಂದು ಮೈ ಕುಲುಕಿಸಿದ ಅಭಿನಯಶ್ರೀ ಅವರಂಥ ಡ್ಯಾನ್ಸರ್‌ಗಳನ್ನು ಮತ್ತೆ ಮತ್ತೆ ನೋಡಲು ಸಾಧ್ಯವಾಗುತ್ತಿಲ್ಲ. ಆದರೆ, ಪರಭಾಷೆಯಲ್ಲಿ ಅಲ್ಲಿನ ನಾಯಕಿಯರಿಗೆ ಐಟಂ ಹಾಡುಗಳು ಸ್ಟಾರ್ ಡಮ್ ಕಲ್ಪಿಸುತ್ತಿವೆ. ಅಂಥ ಹಾಡುಗಳು ನೋಡುಗರಿಗೂ, ಕೇಳುಗರಿಗೂ ಕಿಕ್ ಕೊಡುತ್ತಿವೆ. ಯಾವ ಮಟ್ಟಿಗೆ ಅಂದರೆ ಹಿಂದಿ ಗೊತ್ತಿಲ್ಲದವನೂ ‘ಶೀಲಾ ಕಿ ಜವಾನಿ’, ‘ಚಿಕ್ನಿ ಚಮೇಲಿ...’ಯಂಥ ಹಾಡುಗಳನ್ನು ಗುನುಗುತ್ತಾನೆ. ತೆಲುಗು ಬಾರದಿದ್ದರೂ ‘ರಿಂಗ ರಂಗಾ ರಿಂಗಾರೇ’ ಎನ್ನುವ ಹಾಡಿಗೆ ಹೆಜ್ಜೆ ಹಾಕುತ್ತಾನೆ. ಹೀಗಾಗಿಯೇ ಕತ್ರಿನಾ ಕೈಫ್, ಕರೀನಾ ಕಪೂರ್, ಶ್ರುತಿ ಹಾಸನ್, ತಮನ್ನಾ, ನಯನತಾರ, ತಾಪ್ಸೀ, ತ್ರಿಶಾ ಮುಂತಾದ ಸ್ಟಾರ್ ನಟಿಯರು ಐಟಂ ಹಾಡುಗಳ ಮೂಲಕವೂ ಸ್ಟಾರ್‌ಗಿರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಆದರೆ, ಕನ್ನಡದಲ್ಲಿ ಇದೇಕೆ ಸಾಧ್ಯವಾಗುತ್ತಿಲ್ಲ? ‘ನಾ ಇಂಟಿ ಪೇರು ಸಿಲ್ಕು ನಾ ವಂಟಿ ರಂಗ ಮಿಲ್ಕು’ ಎಂದು ತೆಲುಗು ಪಡ್ಡೆಗಳನ್ನು ಕುಣಿಸಿದ ತಮನ್ನಾ ಅವರೇ ಕನ್ನಡದ ‘ಜಾಗ್ವಾರ್’ನ ಐಟಂ ಹಾಡಿಗೆ ಹೆಜ್ಜೆ ಹಾಕಿದರೂ ಅದು ಇಲ್ಲಿ ಕ್ಲಿಕ್ ಆಗಲಿಲ್ಲ. ಅಲ್ಲದೆ ಪೂನಂ ಪಾಂಡೆ, ಸನ್ನಿ ಲಿಯೋನ್‌ರಂಥ ಸೆಕ್ಸೀ/ ಹಾಟ್ ಬೆಡಗಿಯರಿಂದಲೂ ಕನ್ನಡದಲ್ಲಿ ಒಂದು ದಾಖಲೆ ಸೃಷ್ಟಿಸಲಾಗಲಿಲ್ಲ. ಹಾಗೆ ನೋಡಿದರೆ ಕನ್ನಡದಲ್ಲೂ ಬೇಡಿಕೆಯ ನಟಿಯರೇ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ರಮ್ಯಾ, ರಾಗಿಣಿ, ಪಾರೂಲ್ ಯಾದವ್, ಐಂದ್ರಿತಾ ರೇ, ಹರಿಪ್ರಿಯಾ, ನೀತೂ, ಅನಿತಾ ಭಟ್, ಅನುಶ್ರೀ ಹೀಗೆ ಕನ್ನಡದ ಬಹಳಷ್ಟು ನಟಿಯರು ಐಟಂ ಗೀತೆಗಳಿಗೆ ಗೆಜ್ಜೆ ಕಟ್ಟಿದ್ದಾರೆ. ಕಳೆದವಾರವಷ್ಟೆ ಐಂದ್ರಿತಾ ರೇ ‘ಪ್ರೀತಿಯ ಪಾರಿವಾಳ...’ ಅಂತ ಕುಣಿದರೂ ಆ ಹಾಡು ಯಾರಿಗೂ ನೆನಪಾಗುತ್ತಿಲ್ಲ. ಇದೇ ನಟಿಯ ‘ಕಡ್ಡಿಪುಡಿ’ಯ ‘ಸೌಂದರ್ಯ ಸಮರ...’ ಮಾತ್ರ ಈಗಲೂ ಕೇಳಿದರೆ ಆಪ್ತವಾಗುತ್ತದೆ. ಜೋಗಿ ಪ್ರೇಮ್ ಚಿತ್ರಗಳದ್ದು ಸೇರಿದಂತೆ ಇತ್ತೀಚೆಗೆ ಬಂದ ಒಂದೆರಡು ಹಾಡುಗಳನ್ನು ಬಿಟ್ಟರೆ ಕನ್ನಡದಲ್ಲಿ ಐಟಂ ಹಾಡುಗಳು ಗೆದ್ದಿದ್ದೇ ಇಲ್ಲ. ಇವೆಲ್ಲದರ ನಡುವೆ ಶುಭಾ ಪೂಂಜಾ ‘ಆರ್‌ಜಿವಿ’ ಹೆಸರಿನ ಐಟಂ ಹಾಡಿಗೆ ಕುಣಿಯುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಐಟಂ ಹಾಡುಗಳೆಂದರೆ, ಕ್ಯಾಬರೆ ಡ್ಯಾನ್ಸ್‌ಗಳ ಸುಧಾರಿತ ರೂಪ ಎನ್ನುವಂತಾಗಿದೆ. ಹೀಗಾಗಿ ಈ ದಿನಗಳ ಐಟಂ ಹಾಡಿಗಳಲ್ಲಿನ ಸಾಹಿತ್ಯಕ್ಕಿಂತಲೂ, ಮೈಮಾಟವೇ ಹೆಚ್ಚು ಸೆಕ್ಸಸ್ ಆಗುತ್ತಿದೆ. ಅಲ್ಲದೆ ಸಾಹಿತ್ಯದ ತಿಳಿವಳಿಕೆ ಇದ್ದವರು ಅಥವಾ ತುಂಬಾ ಸೊಗಸಾಗಿ ಹಾಡುಗಳನ್ನು ಬರೆಯುವ ಜಯಂತ್ ಕಾಯ್ಕಿಣಿ ಅವರಂಥವರು ಈ ಸ್ಪೆಷಲ್ ಹಾಡುಗಳಿಗೆ ಸಾಹಿತ್ಯ ಕೊಡುವುದಿಲ್ಲ. ಐಟಂ ಹಾಡುಗಳನ್ನು ಬರೆಯುವವರು ಕೇವಲ ಸದ್ದು ಮಾಡುವ ಟಪ್ಪಾಂಗುಚ್ಚಿ ಶೈಲಿಯಲ್ಲಿಯೇ ಸಾಹಿತ್ಯ ನೀಡುತ್ತಿದ್ದಾರೆ. ಬಿಗ್ರೇಡ್ ಪದಗಳೇ ಇಲ್ಲಿ ಬಳಕೆ ಆಗುತ್ತಿವೆ. ಈ ಕೊರತೆಯೇ ಇಂದು ಕನ್ನಡದ ಐಟಂ ಹಾಡುಗಳನ್ನು ಅಧೋಗತಿಗೆ ತಂದಿದೆ.
(ಕನ್ನಡಪ್ರಭ ವಾರ್ತೆ)
