ಲಕ್ನೋ[ಅ.07]: ನವರಾತ್ರಿಯ ಸಂದರ್ಭದಲ್ಲಿ ಎಲ್ಲಡೆ ಪೂಜೆ ನಡೆಯುತ್ತಿದೆ. ದೊಡ್ಡ ದೊಡ್ಡ ಅದ್ಧೂರಿ ವೇದಿಕೆಗಳನ್ನು ನಿರ್ಮಿಸಿ ದೇವಿಯ ಸುಂದರವಾದ ಹಾಗೂ ದುಬಾರಿ ಪ್ರತಿಮೆಗಳನ್ನಿಟ್ಟು ಪೂಜೆ ನಡೆಸುತ್ತಿದ್ದಾರೆ. ಹೀಗಿರುವಾಗ ಸರ್ಕಾರಿ ಶಾಲೆ ಮಕ್ಕಳ ಫೋಟೋ ಒಂದು ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ಸೌಂಡ್ ಮಾಡುತ್ತಿದೆ.

ಹೌದು ನವರಾತ್ರಿಯ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಸಿಂಹದ ಮೇಲೆ ಕುಳಿತ ದುರ್ಗೆ ದೈತ್ಯ ಮಹಿಷಾಸುರನನ್ನು ವಧಿಸುವ ಚಿತ್ರಣವನ್ನು ತೋರಿಸಿಕೊಟ್ಟಿದ್ದಾರೆ. ಇದನ್ನು ನೋಡಿದವರೆಲ್ಲರೂ ಮಕ್ಕಳ ಕ್ರಿಯೇಟಿವಿಟಿಗೆ ಭೇಷ್ ಎಂದಿದ್ದಾರೆ.

ಮನೋಜ್ ಕುಮಾರ್ ಎಂಬವರು ಟ್ವಿಟರ್ ನಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದು, ಅನೇಕ ಮಂದಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಪೋಟೋ ಶೇರ್ ಮಾಡಿಕೊಂಡಿರುವ ಮನೋಜ್ 'ದುರ್ಗಾ ಪೂಜೆ ಹಿನ್ನೆಲೆ ಅನೇಕರು ನನಗೆ ಸುಂದರವಾದ ಪ್ರತಿಮೆಗಳ ಫೋಟೋ ಕಳುಹಿಸಿದ್ದಾರೆ. ಆದರೆ ಸರ್ಕಾರಿ ಶಾಲೆಯ ಮಕ್ಕಳು ಮಾಡಿದ ದುರ್ಗೆಯ ಈ ಚಿತ್ರಣ ಎಲ್ಲಕ್ಕಿಂತ ಶ್ರೇಷ್ಠ. ಇದು ಲೈಂಗಿಕ ಸಮಾನತೆ ಹಾಗೂ ಕ್ರಿಯೇಟಿವಿಟಿಗೆ ಅತ್ಯಂತ ಸೂಕ್ತ ಉದಾಹರಣೆ' ಎಂದಿದ್ದಾರೆ. 

ಈ ಟ್ವೀಟ್ ನ್ನು ಉದ್ಯಮಿ ಆನಂದ್ ಮಹೀಂದ್ರ ಕೂಡಾ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ 'ನಾನು ಈವರೆಗೆ ದೊಡ್ಡ ದೊಡ್ಡ ಪೆಂಡಾಲ್ ಗಳಲ್ಲಿ ದುರ್ಗೆಯ ಪ್ರತಿಮೆಗಳನ್ನು ನೋಡಿದ್ದೇನೆ. ಆದರೆ ಈ ಫೋಟೋ ಇವೆಲ್ಲವನ್ನೂ ಮೀರಿಸುವಂತಿದೆ. ಉತ್ಸುಕತೆಯ ವಿಚಾರ ಬಂದಾಗೆಲ್ಲಾ ಮಕ್ಕಳು ದೊಡ್ಡವರನ್ನೂ ಮೀರಿಸುತ್ತಾರೆ. ಮಹಾ ಅಷ್ಟಮಿಯ ಈ ದಿನದಂದು ಎಲ್ಲರಿಗೂ ನನ್ನ ಶುಭಾಷಯಗಳು' ಎಂದಿದ್ದಾರೆ.

ಈ ಫೋಟೋ ಯಾರು? ಯಾವ ಶಾಲೆಯ ಮಕ್ಕಳು ಎಂಬ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಆದರೆ ಟ್ವಿಟ್ ರನಲ್ಲಿ ಬಂದಿರುವ ಕಮೆಂಟ್ ಗಳಲ್ಲಿ ಇವರು ಉತ್ತರ ಪ್ರದೇಶದ ಶಾಲೆಯ ಮಕ್ಕಳು ಎಂಬ ಮಾಹಿತಿ ಲಭ್ಯವಾಗಿದೆ