ಹರಿಯಾಣ (ಸೆ. 11): ‘ಹರಿಯಾಣ ಮತ್ತಿತರ ಜಿಲ್ಲೆಗಳಲ್ಲಿ 15-20 ಜನರ ಕ್ರೂರಿ ಗುಂಪೊಂದು ಓಡಾಡುತ್ತಿದೆ. ಅವರೊಂದಿಗೆ ಮಕ್ಕಳೂ ಇದ್ದಾರೆ. ಅವರು ರಾತ್ರಿಹೊತ್ತು ಮಕ್ಕಳು ಅತ್ತಂತೆ ಶಬ್ದ ಮಾಡುತ್ತಾರೆ. ಆಗ ದಯವಿಟ್ಟು ಬಾಗಿಲು ತೆಗೆದು ಹೊರಹೋಗಬೇಡಿ. ಅವರಲ್ಲಿ ಆಯುಧಗಳಿವೆ. ಈ ಸಂದೇಶವನ್ನು ದೇಶಾದ್ಯಂತ ಸಾಧ್ಯವಾದಷ್ಟು ಜನರಿಗೆ ಕಳುಹಿಸಿ. ಇದನ್ನು ಹರಿಯಾಣ ಪೊಲೀಸರೇ ಕಳುಹಿಸಿದ್ದಾರೆ’ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ.

ಈ ಸಂದೇಶದೊಂದಿಗೆ ಮೇಕೆಯ ರೀತಿಯ ಮನುಷ್ಯನೊಬ್ಬ ಯಾರನ್ನೋ ಕೊಲೆ ಮಾಡಿದಂತಹ ಅಸ್ಪಷ್ಟ ವಿಡಿಯೋವಿದೆ. ಈ ಹಿಂದೆ ಕೂಡ ಗೋಟ್ಮ್ಯಾನ್ ಹಲವರನ್ನು ಕೊಲೆ ಮಾಡಿದ್ದಾಗಿ ಹೇಳಿದ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ನಿಜಕ್ಕೂ ಹರಿಯಾಣದಲ್ಲಿ 15-20 ಜನರ ಗುಂಪು ರಾತ್ರಿ ವೇಳೆ ಜನರನ್ನು ಕೊಲ್ಲುತ್ತಿದೆಯೇ ಎಂದು ಪರಿಶೀಲಿಸಿದಾಗ, ಇದು ಸುಳ್ಳು ಸುದ್ದಿ, ಚಿತ್ರಕಾರರೊಬ್ಬರು ಬಿಡಿಸಿದ್ದ ಚಿತ್ರವನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ ಎಂಬ ಅಂಶ ಬಯಲಾಗಿದೆ.

ಈ ಚಿತ್ರದ ಜಾಡು ಹಿಡಿದು ಹೊರಟಾಗ ‘ಡಿವೈನ್ ಆರ್ಟ್’ ವೆಬ್‌ಸೈಟ್ ನಿಂದ ಪಡೆದುಕೊಂಡಿದ್ದು ಪತ್ತೆಯಾಗಿದೆ. ಆ ವೆಬ್‌ಸೈಟ್‌ನಲ್ಲಿ ಈಗ ವೈರಲ್ ಆಗಿರುವ ಚಿತ್ರ ಇದ್ದು ಅದರಲ್ಲಿ, ‘ಅತಿ ಹೆಚ್ಚು ಪ್ರಚಾರವಾದ ನನ್ನ ಕಲೆ’ ಎಂದು ವಿವರಣೆ ಬರೆಯಲಾಗಿತ್ತು. ಬೂಮ್ ಆ ಕಲಾವಿದರನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಿದ್ದು, ಸ್ಪರ್ಧೆಯ ಸಲುವಾಗಿ 2011 ರಲ್ಲಿ ಬಿಡಿಸಲಾಗಿದ್ದ ಡಿಜಿಟಲ್ ಚಿತ್ರವದು. ಆದರೆ ಆಗಿನಿಂದಲೂ ಹಲವರು ನನ್ನ ಅನುಮತಿ ಇಲ್ಲದೇ ಆ ಚಿತ್ರವನ್ನು ಸಾಮಾಜಿಕ ಮಾಧ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದು ಜನರಲ್ಲಿ ಭೀತಿ ಹುಟ್ಟಿಸಿದೆ’ ಎಂದಿದ್ದಾರೆ. ಹಾಗಾಗಿ ಈ ಸುದ್ದಿಯೇ ಸುಳ್ಳು. 

-ವೈರಲ್ ಚೆಕ್