ದುಬಾರಿ ಬೆಲೆಯ ಸೈಕಲ್ ಕಳವು ಮಾಡುತ್ತಿದ್ದ ಆರೋಪಿ ಹಾಗೂ ಕದ್ದ ಸೈಕಲ್ ಕೊಳ್ಳುತ್ತಿದ್ದವನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಗೋಪಾಲಪುರ ನಿವಾಸಿ ಮಹಮದ್ ಇಸಾಕ್ ಅಹ್ಮದ್  ಹಾಗೂ ಸಿಟಿ ಮಾರ್ಕೆಟ್‌ನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಸೈಯದ್ ಇಕ್ಬಾಲ್ ಬಂಧಿತರು.

ಬೆಂಗಳೂರು: ದುಬಾರಿ ಬೆಲೆಯ ಸೈಕಲ್ ಕಳವು ಮಾಡುತ್ತಿದ್ದ ಆರೋಪಿ ಹಾಗೂ ಕದ್ದ ಸೈಕಲ್ ಕೊಳ್ಳುತ್ತಿದ್ದವನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಗೋಪಾಲಪುರ ನಿವಾಸಿ ಮಹಮದ್ ಇಸಾಕ್ ಅಹ್ಮದ್ ಹಾಗೂ ಸಿಟಿ ಮಾರ್ಕೆಟ್‌ನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಸೈಯದ್ ಇಕ್ಬಾಲ್ ಬಂಧಿತರು.

ಆರೋಪಿಗಳಿಂದ 12 ಸೈಕಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಅಹ್ಮದ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ದುಬಾರಿ ಬೆಲೆಯ ಸೈಕಲ್ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದ. ಸ್ಯಾಂಕಿ ಟ್ಯಾಂಕ್ ಹಾಗೂ ಪಾರ್ಕ್ ಇನ್ನಿತರೆ ಕಡೆ ಯಾರಾದರೂ ಬಂದರೆ ಆರೋಪಿ ಅವರನ್ನೇ ಹಿಂಬಾಲಿಸಿಕೊಂಡು ಹೋಗುತ್ತಿದ್ದ.

ಸೈಕಲ್ ಮಾಲೀಕರು ಲಾಕ್ ಮಾಡಿ ಒಳಗೆ ಹೋಗುತ್ತಿದ್ದಂತೆ ಆರೋಪಿ ಲಾಕ್ ಮುರಿದು ಸೈಕಲ್‌ನೊಂದಿಗೆ ಪರಾರಿ ಯಾಗುತ್ತಿದ್ದ. ಕದ್ದ ಸೈಕಲ್‌ನ್ನು ಸಿಟಿ ಮಾರ್ಕೆಟ್‌ನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಸೈಯದ್ ಇಕ್ಬಾಲ್‌ಗೆ ಮೂರು ಸಾವಿರದಿಂದ ಐದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಕಳೆದ ಮೂರು ತಿಂಗಳಿಂದ ಸದಾಶಿವ ನಗರ ಠಾಣಾ ವ್ಯಾಪ್ತಿಯಲ್ಲಿ ಸೈಕಲ್ ಕಳವು ಪ್ರಕರಣ ಹೆಚ್ಚಾಗಿತ್ತು. ಸದಾಶಿವನಗರದ ಸ್ಯಾಂಕಿ ಕೆರೆ ಬಳಿಯ ಫುಟ್‌ಪಾತ್‌ನಲ್ಲಿ ಫೆ. 27ರಂದು ನಿಲ್ಲಿಸಿದ್ದ ಎಂ.ಮಣಿವಣ್ಣನ್ ಎಂಬುವರ 20 ಸಾವಿರ ಮೌಲ್ಯದ ಸೈಕಲ್ ಕದ್ದಿದ್ದ. ಈ ಬಗ್ಗೆ ಮಣಿವಣ್ಣನ್ ದೂರು ನೀಡಿ ದ್ದರು. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ಹೆಚ್ಚು ಗಸ್ತು ನಿಯೋಜಿಸಲಾಗಿತ್ತು. ಆರೋಪಿ ಪುನಃ ಕಳ್ಳತನಕ್ಕೆ ಬಂದಾಗಲೇ ಸಿಕ್ಕಿ ಬಿದ್ದ.