ಕದ್ದ ಚಿನ್ನ ವೇಶ್ಯೆಯರಿಂದ ಮಾರಿಸುತ್ತಿದ್ದ ಕಳ್ಳ ಸೆರೆ

news | Saturday, January 13th, 2018
Suvarna Web Desk
Highlights

ಸೇಲ್ಸ್‌ಮನ್ ಸೋಗಿನಲ್ಲಿ ಮನೆ ಕಳ್ಳತನ ಮಾಡಿ, ಕದ್ದ ಚಿನ್ನಾಭರಣವನ್ನು ವೇಶ್ಯೆಯರಿಂದ ಮಾರಾಟ ಮಾಡಿಸುತ್ತಿದ್ದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜ.13): ಸೇಲ್ಸ್‌ಮನ್ ಸೋಗಿನಲ್ಲಿ ಮನೆ ಕಳ್ಳತನ ಮಾಡಿ, ಕದ್ದ ಚಿನ್ನಾಭರಣವನ್ನು ವೇಶ್ಯೆಯರಿಂದ ಮಾರಾಟ ಮಾಡಿಸುತ್ತಿದ್ದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಜಯನಗರ ನಿವಾಸಿ ಸಯ್ಯದ್ ಅಹ್ಮದ್ (32) ಬಂಧಿತ. ಆರೋಪಿಯಿಂದ 24 ಲಕ್ಷ ಮೌಲ್ಯದ 800 ಗ್ರಾಂ ಚಿನ್ನಾಭರಣ, ಒಂದು ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ತುಮಕೂರು ಮೂಲದ ಸಯ್ಯದ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಪೋಷಕರೊಂದಿಗೆ ಜಯನಗರದಲ್ಲಿ ನೆಲೆಸಿದ್ದ. ಸಯ್ಯದ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರಿಂದ ಪೋಷಕರು ಆತನನ್ನು ಕೆಲ ವರ್ಷಗಳ ಹಿಂದೆ ಮನೆಯಿಂದ ಹೊರ ಹಾಕಿದ್ದರು.

 ಮನೆಯಿಂದ ಹೊರ ಬಂದ ಆರೋಪಿ ವಿವಾಹವಾಗಿದ್ದ. ಈತನ ವರ್ತನೆಯಿಂದ ಬೇಸತ್ತ ಪತ್ನಿ ಆತನಿಂದ ದೂರವಾಗಿದ್ದಾಳೆ.  ಹೀಗಾಗಿ ಸಯ್ಯದ್ ಹೋಟೆಲ್ ಹಾಗೂ ಸ್ನೇಹಿತರ ರೂಮ್‌ನಲ್ಲಿ ಉಳಿದುಕೊಳ್ಳುತ್ತಿದ್ದ. ಸೇಲ್ಸ್‌ಮನ್ ಸೋಗಿನಲ್ಲಿ ಮನೆ ಬಳಿ ಹೋಗುತ್ತಿದ್ದ ಆರೋಪಿ ಮನೆಯ ಕಾಲಿಂಗ್ ಬೆಲ್ ಒತ್ತುತ್ತಿದ್ದ. ಎಷ್ಟು ಬಾರಿ ಕಾಲಿಂಗ್ ಬೆಲ್ ಮಾಡಿದರೂ ಒಳಗಿನಿಂದ ಪ್ರತಿಕ್ರಿಯೆ ಬರಲಿಲ್ಲ ಎಂದರೆ, ಯಾರೂ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಬಾಗಿಲು ಮೀಟಿ ಮನೆ ಒಳಗೆ ಪ್ರವೇಶಿಸುತ್ತಿದ್ದ. ಬಳಿಕ ಮನೆಯಲ್ಲಿ ಕಳವು ಮಾಡಿ ಆರೋಪಿಗಳು ಪರಾರಿಯಾಗುತ್ತಿದ್ದ. ಕಾಲಿಂಗ್ ಬೆಲ್ ಒತ್ತುತ್ತಿದ್ದ ವೇಳೆ ಮನೆಯಿಂದ ಯಾರಾದರೂ ಹೊರಗೆ ಬಂದರೆ ವಿಳಾಸ ಕೇಳುವ ನೆಪದಲ್ಲಿ ನಟಿಸಿ ಸ್ಥಳದಿಂದ ಕಾಲ್ಕಿಳುತ್ತಿದ್ದ ಎಂದು ಪೊಲೀಸರು ಹೇಳಿದರು.

ವೇಶ್ಯೆಯರ ಬಳಕೆ: ಕಳವು ಮಾಡಿದ ಚಿನ್ನಾಭರಣವನ್ನು ತಾನೇ ಖುದ್ದಾಗಿ ಹೋಗಿ ಮಾರಾಟ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುತ್ತೇನೆಂದು ತಿಳಿದಿದ್ದ ಆರೋಪಿ ಇದಕ್ಕಾಗಿ ವೇಶ್ಯೆಯರನ್ನು ಬಳಸಿಕೊಳ್ಳುತ್ತಿದ್ದ. ವೇಶ್ಯೆಯರಿಗೆ ಬುರ್ಖಾ ಧರಿಸಿ ಗಿರವಿ ಅಂಗಡಿಗೆ ಕರೆದೊಯ್ಯುತ್ತಿದ್ದ. ವೇಶ್ಯೆಯರನ್ನು ತನ್ನ ಅಕ್ಕ, ತಂಗಿ ಎಂದು ಚಿನ್ನಾಭರಣ ಮಳಿಗೆ ಸಿಬ್ಬಂದಿ ಬಳಿ ಪರಿಚಯಿಸಿಕೊಂಡು ಚಿನ್ನಾಭರಣ ಮಾರಾಟ ಮಾಡುತ್ತಿದ್ದ. ಬಳಿಕ ವೇಶ್ಯೆಯರಿಗೆ ಮೂರರಿಂದ ಐದು ಸಾವಿರ ರು. ನೀಡುತ್ತಿದ್ದನು. ಪ್ರತಿ ಬಾರಿಯೂ ಆರೋಪಿ ಚಿನ್ನಾಭರಣ ಮಾರಾಟಕ್ಕೆ ಬೇರೆ-ಬೇರೆ ವೇಶ್ಯೆಯರನ್ನು ಬಳಸಿಕೊಳ್ಳುತ್ತಿದ್ದ. ಯಾರಾದರೂ ಮೊಬೈಲ್ ಸಂಖ್ಯೆ ಕೇಳಿದರೆ ನೀಡುತ್ತಿರಲಿಲ್ಲ.

ತಾನು ಸೂಟ್‌ಬೂಟ್ ಧರಿಸಿ ಬಾಡಿಗೆ ಕಾರಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ನಡೆದುಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿ ಮಾಹಿತಿ ನೀಡಿದರು. ಸಯ್ಯದ್ ಈ ಹಿಂದೆ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡ ಬಳಿಕವು ಕಳವು ಕೃತ್ಯ ಮುಂದುವರಿಸಿದ್ದ. ಆರೋಪಿ ವಿರುದ್ಧ ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ 80ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದರು.

Comments 0
Add Comment

    ನಾಳೆ ಕರ್ನಾಟಕ ಬಂದ್ : ಏನಿರುತ್ತೆ, ಏನಿಲ್ಲ, ಯಾರು ಬೆಂಬಲ, ಯಾರಿಲ್ಲ

    karnataka-assembly-election-2018 | Sunday, May 27th, 2018